ಸಮಗ್ರ ನ್ಯೂಸ್: ಪೆನ್ ಡ್ರೈವ್ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಸೋಮವಾರ ದಿಡೀರ್ ವಿಡಿಯೋ ಮುಖಾಂತರ ಪ್ರತ್ಯಕ್ಷರಾಗಿದ್ದಾರೆ. ಆಗ ಮೇ 31ಕ್ಕೆ ಭಾರತಕ್ಕೆ ಬರುವುದಾಗಿ ಮಾಹಿತಿ ನೀಡಿದ್ದರು, ಈಗ ಜರ್ಮನಿಯಿಂದ ವಾಪಸ್ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಲುಫ್ತಾನ್ಸಾ ಸಂಸ್ಥೆಯ ವಿಮಾನದಲ್ಲಿ ಏರ್ ಟಿಕೆಟ್ ಬುಕ್ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ತನಿಖೆ ನಡೆಸುವ ಎಸ್ಐಟಿ ಪ್ರಜ್ವಲ್ ರೇವಣ್ಣಗಾಗಿ ಕಾಯುತ್ತಿದ್ದು ಭಾರತಕ್ಕೆ ಬಂದ ತಕ್ಷಣ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಚ್ನಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಟಿಕೆಟ್ ಬುಕ್ ಮಾಡಿಕೊಂಡಿದ್ದು ವಿಮಾನದ ಬ್ಯುಸಿನೆಸ್ ಕ್ಲಾಸ್ ವರ್ಗದಲ್ಲಿ ಅವರು ತಮ್ಮ ಟಿಕೆಟ್ ಕಾಯ್ದಿರಿಸಿದ್ದಾರೆ.
ಅಲ್ಲಿಂದಲೇ ಅವರನ್ನು ಎಸ್ಐಟಿ ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಿದ್ದಾರೆ.
ಮೇ 31ರಂದು ಪ್ರಜ್ವಲ್ ರೇವಣ್ಣ ಯಾಕೆ ಬರುತ್ತಾರೆ ಎಂದರೆ ಅವರ ಕಳೆದ ಬಾರಿಯ ಸಂಸದ ಸ್ಥಾನ ಅವಲಂಬಿಸಿ ನೀಡಲಾದ ರಾಜತಾಂತ್ರಿಕ ಪಾಸ್‌ಪೋರ್ಟ್‌ನ ಅವಧಿ ಅಂತ್ಯವಾಗಲಿದೆ. ಈ ಸಲ ಚುನಾಯಿತರಾದರೆ ಅವರು ಹೊಸದಾಗಿ ರಾಜತಾಂತ್ರಿಕ ಪಾಸ್‌ಪೋರ್ಟ್ ಮಾಡಿಸಿಕೊಳ್ಳಬೇಕಿದೆ. ಹೀಗಾಗಿ ಹಳೆಯ ಪಾಸ್‌ಪೋರ್ಟ್‌ನಲ್ಲಿ ಓಡಾಡಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ ಪ್ರಜ್ವಲ್ ಮೇ 31ನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.