ಸಮಗ್ರ ನ್ಯೂಸ್ : ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರ ಮೀಸಲಾತಿಯನ್ನು ಮುಸ್ಲಿಮರಿಗೆ ಹಂಚಿಕೆ ಮಾಡುತ್ತಾರೆ ಎಂದು ಆರ್ಎಸ್ಎಸ್, ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಹೀಗೆ ಮಾಡಲು ಸಂವಿಧಾನದಲ್ಲಿ ಅವಕಾಶವೇ ಇಲ್ಲ’ ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಮುಖಂಡ ಮಾವಳ್ಳಿ ಶಂಕರ್ ಹೇಳಿದರು.
ಅವರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು, ದೇಶದಲ್ಲಿನ ಎಲ್ಲ ಬಿಕ್ಕಟ್ಟುಗಳಿಗೆ ಆರ್ಎಸ್ಎಸ್ ಕಾರಣ. ಜನ ಹಸಿವು, ಅರಾಜಕತೆಯಿಂದ ನರಳುತ್ತಿರಬೇಕೆನ್ನುವುದು ಇವರ ಅಜೆಂಡಾ. ಇದನ್ನು ಸ್ವತಃ ಆರ್ಎಸ್ಎಸ್ನ ಗೋಳ್ವಾಳಕರ್ ಅವರೇ ಹೇಳಿದ್ದಾರೆ ಎಂದರು.
ಹತ್ತು ವರ್ಷಗಳಲ್ಲಿ ಭಾರತ ಹಿಮ್ಮುಖವಾಗಿ ಚಲಿಸುತ್ತಿದೆ. ಬಿಜೆಪಿಯ ಅವಕಾಶವಾದಿ ರಾಜಕೀಯ, ಲೂಟಿಕೋರ, ಉದ್ದಿಮೆದಾರರು, ಪುರೋಹಿತಷಾಹಿ ವರ್ಗದವರು ಇವರಿಗೆ ಬೆಂಬಲವಾಗಿ ನಿಂತಿದ್ದಾರೆ. ಹತ್ತು ವರ್ಷಗಳಲ್ಲಿ ಹಸಿವು, ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಕೋಮುವಾದಿಗಳು ವಿಜೃಂಭಿಸಿ ಚರಿತ್ರೆ ತಿರುಚಿ, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿಯೇ ಮತದಾರರು ಬಿಜೆಪಿಯನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.
ಮುಖಂಡ ಗುರುಪ್ರಸಾದ್ ಕೆರೆಗೋಡು ಮಾತನಾಡಿ, ‘ಈ ಸಲದ ಚುನಾವಣೆಯಲ್ಲಿ ಮತದಾರರು ಯೋಚಿಸಿ ಮತ ಚಲಾಯಿಸಬೇಕು ಇಲ್ಲವಾದಲ್ಲಿ ಭಾರತ ಸರ್ವಾಧಿಕಾರ ಆಡಳಿತಕ್ಕೆ ಒಳಪಡುತ್ತದೆ. ಮುಂದೆ ಚುನಾವಣೆಗಳು ನಡೆಯುವುದು ಅನಿಶ್ಚಿತ’ ಎಂದರು.
‘ಮೋದಿ ಅವರು ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿ ಲಜ್ಜೆಗೆಟ್ಟ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಸಿಯುತ್ತಾರೆ ಎಂದು ಹೇಳಿರುವುದು ಭಾರತೀಯರು ತಲೆ ತಗ್ಗಿಸುವ ವಿಷಯ. ಹಿಂದಿನ ಯಾವ ಪ್ರಧಾನಿಯೂ ಜನಾಂಗೀಯ ದ್ವೇಷ ಭಾಷಣ ಮಾಡಿರಲಿಲ್ಲ’ ಎಂದರು.