ಮಂಗಳೂರು: ಬಸ್ಸಿನಿಂದ ಹೊರಗೆಸೆಯಲ್ಪಟ್ಟು ವಿದ್ಯಾರ್ಥಿ ಸಾವು| ಚಾಲಕ ಮತ್ತು ನಿರ್ವಾಹಕ ಅರೆಸ್ಟ್

ಸಮಗ್ರ ನ್ಯೂಸ್: ಬಸ್ಸಿನಿಂದ ಹೊರಗೆಸೆಯಲ್ಪಟ್ಟು ತಲೆಗೆ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಬಸ್ ಚಾಲಕ ಮತ್ತು ನಿರ್ವಾಹಕನನ್ನು ಬಂಧಿಸಿದ್ದಾರೆ.

Ad Widget ... ..

ಬಂಧಿತ ಬಸ್​ ಚಾಲಕನನ್ನು ಕುಪ್ಪೆಪದವು ನಿವಾಸಿ ಕಾರ್ತಿಕ್ ಆರ್ ಶೆಟ್ಟಿ(30) ಮತ್ತು ಬಸ್​ ನಿರ್ವಾಹಕ ಅಂಬ್ಲಮೊಗರು ನಿವಾಸಿ ದಂಶೀರ್ (30) ಎಂದು ಗುರುತಿಸಲಾಗಿದೆ.

Ad Widget

ಸೆ 7ರಂದು ಉಳ್ಳಾಲದ ಮಾಸ್ತಿಕಟ್ಟೆಯಿಂದ ಬರುತ್ತಿದ್ದ ಯಶರಾಜ್(16) ಎಂಬ ವಿದ್ಯಾರ್ಥಿ ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ. 44 ಡಿ ನಂಬರಿನ ಖಾಸಗಿ ಬಸ್ಸಿನಲ್ಲಿ ಉಳ್ಳಾಲದಿಂದ ಮಂಗಳೂರಿಗೆ ಕಾಲೇಜಿಗೆ ಬರುತ್ತಿದ್ದ ವೇಳೆ ಅವಘಡ ಸಂಭವಿಸಿತ್ತು.

ಬಸ್​​ನಲ್ಲಿ ಪ್ರಯಾಣಿಕರು ಹೆಚ್ಚಿದ್ದರಿಂದ ಬಸ್​​​​​ ಮುಂಭಾಗದ ಮೆಟ್ಟಿಲಿನಲ್ಲಿ ವಿದ್ಯಾರ್ಥಿ ಯಶರಾಜ್ ನೇತಾಡುತ್ತಿದ್ದ. ಉಳ್ಳಾಲದ ನೇತ್ರಾವತಿ ಸೇತುವೆಯ ಬಳಿ ಈತ ಬಸ್ ನಿಂದ ರಸ್ತೆಗೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಈತನನ್ನು ಪಂಪ್ ವೆಲ್ ನ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದ. ಸೆ 13ರಂದು ವಿದ್ಯಾರ್ಥಿ ಮೃತಪಟ್ಟಿದ್ದು, ಮೆದುಳು ನಿಷ್ಕ್ರಿಯವಾಗಿದ್ದರಿಂದ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದರು.

ಬಸ್​ ಚಾಲಕನ ಅತಿಧಾವಂತ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ವಿದ್ಯಾರ್ಥಿ ಹೊರಕ್ಕೆಸೆಯಲ್ಪಟ್ಟಿರುವ ಬಗ್ಗೆ ಮೃತ ಹುಡುಗನ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ನಡುವೆ ಹೇಳಿಕೆ ನೀಡಿರುವ ಮಂಗಳೂರು ಕಮಿಷನರ್ ಶಶಿಕುಮಾರ್ ಬಸ್ ಹತ್ತುವ ಮತ್ತು ಇಳಿಯುವ ವೇಳೆ ಅವಘಡಗಳು ಸಂಭವಿಸಿದರೆ ಬಸ್ ನ ಚಾಲಕ ಮತ್ತು ನಿರ್ವಾಹಕರೇ ಕಾರಣರಾಗುತ್ತಾರೆ. ಅವರನ್ನೇ ಆರೋಪಿಗಳೆಂದು ಕೇಸ್‌ ಹಾಕಲಾಗುವುದು ಎಂದು ಸೂಚನೆ ನೀಡಿದ್ದಾರೆ.

Leave a Comment

Your email address will not be published. Required fields are marked *