ಸಮಗ್ರ ನ್ಯೂಸ್: ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಬೇಕು, ವಸ್ತ್ರ ಸಂಹಿತೆ ಕಡ್ಡಾಯ ಸುತ್ತೋಲೆಯನ್ನು ವಾಪಸ್ ಪಡೆಯಬೇಕು, ಧರ್ಮದ ಹೆಸರಿನಲ್ಲಿ ವ್ಯಾಪಾರ ನಿರ್ಬಂಧಕ್ಕೆ ಅವಕಾಶ ನೀಡಬಾರದು, ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಪ್ರಸ್ತಾಪ ಕೈಬಿಡಬೇಕು, ಶಾಂತಿಗೆ ಭಂಗ ತರುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಾಡಿನ ಪ್ರಮುಖ ಸಾಹಿತಿಗಳು ಹಾಗೂ ಚಿಂತಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಡಾ.ಕೆ. ಮರುಳಸಿದ್ದಪ್ಪ, ಡಾ. ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಬೊಳುವಾರ ಮಹಮದ್ ಕುಂಞ, ಡಾ.ಪುರುಷೋತ್ತಮ ಬಿಳಿಮಲೆ, ಡಾ.ರಾಜೇಂದ್ರ ಚೆನ್ನಿ, ಡಾ.ಬಂಜಗೆರೆ ಜಯಪ್ರಕಾಶ್ ಸೇರಿದಂತೆ ಸುಮಾರು 61 ಸಾಹಿತಿಗಳು ಸಹಿ ಮಾಡಿರುವ ಪತ್ರವನ್ನು ಮುಖ್ಯಮಂತ್ರಿಯವರಿಗೆ ರವಾನಿಸಲಾಗಿದ್ದು, ಹಿಜಾಬ್‌ಗೆ ಅವಕಾಶ ನೀಡದಿರುವುದರಿಂದ ಮುಸ್ಲಿಂ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕಳೆದ ಎರಡು ವರ್ಷದಿಂದ ಶಾಲೆಗಳೇ ನಡೆದಿಲ್ಲ. ಬೆಳೆಯುವ ಮಕ್ಕಳು ಹಳೆಯ ಸಮವಸ್ತ್ರಗಳನ್ನು ತೊಡಲು ಆಗುವುದಿಲ್ಲ. ಹೀಗಿರುವಾಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹಿಂದಿನ ದಿನ ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶ ಹೊರಡಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಲಾಗಿದೆ.
ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ಪ್ರಸ್ತಾಪ ಇದ್ದಕ್ಕಿದ್ದಂತೆ ಮುನ್ನೆಲೆಗೆ ಬಂದಿದೆ. ಆದ್ದರಿಂದ ಈ ಪ್ರಸ್ತಾಪ ಕೈಬಿಡಬೇಕು. ಮಕ್ಕಳು ಸಂವಿಧಾನ ಅಭ್ಯಾಸ ಮಾಡುವುದು ಅಗತ್ಯವಾಗಿದೆ. ಜಾತ್ರೆಗಳಲ್ಲಿ ಮುಸ್ಲಿಂರಿಗೆ ವ್ಯಾಪಾರಕ್ಕೆ ನಿರ್ಬಂಧ ಹೇರುತ್ತಿರುವುದು ಸರಿಯಲ್ಲ. ವ್ಯಾಪಾರ ವಹಿವಾಟಿಗೆ ಅಡ್ಡಿ ಉಂಟು ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.