ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬೆಚ್ಚಿಬೀಳಿಸುವ ವರದಿಯೊಂದನ್ನು ಆರೋಗ್ಯ ಇಲಾಖೆ ರಿಲೀಸ್ ಮಾಡಿದ್ದು, ಒಂದಲ್ಲ ಎರಡಲ್ಲ ಬರೊಬ್ಬರಿ ನಾಲ್ಕು ಸಾವಿರ ಮಕ್ಕಳು ದೃಷ್ಟಿ ದೋಷ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಇದು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಅಂದತ್ವ ನಿವಾರಣ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ಭಯಾನಕ ಮಾಹಿತಿ ಪತ್ತೆಯಾಗಿದೆ. ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 4 ಸಾವಿರ ಮಕ್ಕಳು ದೃಷ್ಟಿ ದೋಷದ ಸಮಸ್ಯೆ ಇದ್ದು, ಸುಮಾರು 4398 ಮಕ್ಕಳಿಗೆ ಗಂಭೀರ ದೃಷ್ಟಿ ದೋಷದ ಸಮಸ್ಯೆ ಕಂಡುಬಂದಿರುವುದು ವರದಿಯಲ್ಲಿ ದೃಢಪಟ್ಟಿದೆ. ಈ ಪೈಕಿ 2066 ಮಕ್ಕಳಿಗೆ ಕನ್ನಡಕ ಕಡ್ಡಾಯವಾಗಿ ಧರಿಸುವ ಅಗತ್ಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ 1376 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳನ್ನು ಒಳಗೊಂಡ ಈ ತಪಾಸಣೆ ರಾಷ್ಟ್ರೀಯ ಅಂದತ್ವ ನಿವಾರಣಾ ಯೋಜನೆಯಡಿ ಕೈಗೊಳ್ಳಲಾಗಿತ್ತು. 1,45,951 ಮಕ್ಕಳನ್ನು ಪರೀಕ್ಷಿಸಲಾಗಿದ್ದು, ಅವರಲ್ಲಿ 4,398 ಮಕ್ಕಳಿಗೆ ದೃಷ್ಟಿದೋಷ ಕಂಡುಬಂದಿದೆ. ಮೊಬೈಲ್ ಬಳಕೆಯಿಂದ ಕೇವಲ ದೃಷ್ಟಿದೋಷ ಮಾತ್ರವಲ್ಲ, ಮಾನಸಿಕ ಸಮಸ್ಯೆಗಳೂ ಕಾಣಿಸಿಕೊಂಡಿವೆ. ಇದಕ್ಕಾಗಿ ಮಾನಸಿಕ ಆರೋಗ್ಯ ಕುರಿತು ಮನೋಸ್ಥೈರ್ಯ ಎಂಬ ಜಾಗೃತಿ ಅಭಿಯಾನದ ಜೊತೆಗೆ ಪ್ರತಿ ಶಾಲೆಯ ಒಬ್ಬ ಶಿಕ್ಷಕಿಗೆ ವಿಶೇಷ ತರಬೇತಿ ನೀಡಿ ಮಕ್ಕಳ ಮಾನಸಿಕ ಸಮಸ್ಯೆ ಗುರುತಿಸಲು ಯೋಗ್ಯ ಮಾಡಲಾಗಿದೆ. ಅತಿಯಾದ ಮೊಬೈಲ್ ಬಳಕೆಯು ಮಕ್ಕಳ ದೃಷ್ಟಿ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ.
ಒಟ್ಟಿನಲ್ಲಿ ಆನ್‌ಲೈನ್ ಕ್ಲಾಸ್ ಹೆಸರಲ್ಲಿ ಮಕ್ಕಳ ಕೈ ಸೇರಿದ್ದ ಮೊಬೈಲ್ ಇದೀಗ ಅವರ ಕೈಯಿಂದ ಬಿಡಿಸಲಾಗದಷ್ಟು ಬಿಗಿಯಾಗಿದೆ. ಇನ್ನಾದರು ಪೋಷಕರು ಎಚ್ಚೆತ್ತು ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಬೇಕು, ಸಮಯಕ್ಕೆ ಸರಿಯಾಗಿ ಕಣ್ಣಿನ ತಪಾಸಣೆ ಮಾಡಿಸಿ, ತಜ್ಞರ ಸಲಹೆ ಪಡೆಯುವುದು ಅತ್ಯಂತ ಅಗತ್ಯವಾಗಿದೆ.







