Ad Widget .

ಇಂದಿನಿಂದ ದೀಪಾವಳಿ ಸಂಭ್ರಮ| ಬೆಳಕಿನ ಹಬ್ಬ ಸ್ವಾಗತಕ್ಕೆ ಸಕಲ ಸಿದ್ಧತೆ

ಸಮಗ್ರ ನ್ಯೂಸ್: ಬೆಳಕಿನ ಹಬ್ಬ ದೀಪಾವಳಿಯನ್ನು ಕರಾವಳಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಇಲ್ಲಿನ ಮನೆ ಮನೆಗಳಲ್ಲೂ ಆಚರಣಾ ಕ್ರಮದಂತೆ ಮೂರು ದಿನಗಳಲ್ಲಿ ವಿಶೇಷ ವಿಧಿಗಳನ್ನು ಅನುಸರಿಸಲಾಗುತ್ತದೆ.

Ad Widget . Ad Widget .

ನರಕ ಚತುರ್ದಶಿ ಮುನ್ನಾದಿನವಾದ ಇಂದು (ಅ. 30) ಸಂಜೆ ಹಂಡೆಗೆ ನೀರು ತುಂಬಿಸುವ ಶಾಸ್ತ್ರ ನಡೆಯಲಿದೆ.

Ad Widget . Ad Widget .

ಅ. 31ರ ಬೆಳಗ್ಗೆ 5.17ಕ್ಕೆ ತೈಲಭ್ಯಂಗ, ಅದೇ ದಿನ ಸಂಜೆ ಮೂಲ್ಕಿ ಶಾಂಭವಿ ನದಿ ಉತ್ತರದಲ್ಲಿ ದೀಪಾವಳಿ (ಗದ್ದೆ, ಮನೆಗಳಲ್ಲಿ ದೀಪ ಇಡುವುದು), ನ. 1ರ ಸಂಜೆ ಮೂಲ್ಕಿ ಶಾಂಭವಿ ನದಿ ದಕ್ಷಿಣದ ಪ್ರದೇಶಗಳಲ್ಲಿ ದೀಪಾವಳಿ, ನ. 2ರ ಬೆಳಗ್ಗೆ ಸೂರ್ಯೋದಯ 6.25ರಿಂದ 9.40ರ ಒಳಗೆ/11.15ರ ಅನಂತರ ಗೋಪೂಜೆ ನೆರವೇರಲಿದೆ. ಅ.31 ಹಾಗೂ ನ.2ರ ಶುಭಮುಹೂರ್ತದಲ್ಲಿ ಅಂಗಡಿಪೂಜೆ, ಲಕ್ಷ್ಮೀಪೂಜೆ ಇತ್ಯಾದಿ ನಡೆಸಲಿದ್ದಾರೆ.

ಹಬ್ಬದ ಆಚರಣೆಗಾಗಿ ಖರೀದಿ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ಮಣ್ಣಿನ ಹಣತೆ ಹಾಗೂ ಪರಿಸರ ಸ್ನೇಹಿ ಗೂಡುದೀಪ ಇತ್ಯಾದಿಗಳನ್ನು ಗ್ರಾಹಕರು ಖರೀದಿಸುವುದು ಎಲ್ಲೆಡೆ ಕಂಡು ಬರುತ್ತಿದೆ. ಬುಧವಾರ ಸಂಜೆ ವೇಳೆಗೆ ಬಹುತೇಕ ಮನೆಗಳಲ್ಲಿ ಗೂಡು ದೀಪ ಅಳವಡಿಸಲಾಗುತ್ತದೆ.

ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಭಿನ್ನವಾಗಿ ಆಚರಿಸಲಾಗುತ್ತದೆ. ವಿಭಿನ್ನ ಸಂಸ್ಕೃತಿಯ ನೆಲೆವೀಡು ಎನ್ನಿಸಿರುವ ಕರ್ನಾಟಕದಲ್ಲಿ ಆಯಾ ಭಾಗದಲ್ಲಿ ಹಲವಾರು ವರ್ಷಗಳಿಂದ ಜಾರಿಯಲ್ಲಿರುವ ರೀತಿಯಲ್ಲಿಯೇ ದೀಪಾವಳಿ ಆಚರಿಸುವುದು ವಿಶೇಷ. ಈಗಲೂ ಅದು ಮುಂದುವರಿದಿದೆ. ಈಗಾಗಲೇ ದೀಪಾವಳಿ ಹಬ್ಬಕ್ಕಾಗಿ ಕರ್ನಾಟಕದ ನಾನಾ ಭಾಗಗಳಲ್ಲಿ ಸಿದ್ದತೆ ಜೋರಿದೆ. ಈ ಬಾರಿ ಉತ್ತಮ ಮಳೆಯಾಗಿ ಜಲಾಶಯ, ಕೆರೆಗಳು ತುಂಬಿ ಕೃಷಿ ಚಟುವಟಿಕೆಗಳು ನಡೆದಿವೆ. ಸಮೃದ್ದತೆಯ ಭಾಗವಾಗಿಯೇ ಹಬ್ಬವನ್ನು ಆಚರಿಸಲಾಗುತ್ತಿದೆ.

ಮಧ್ಯ ಕರ್ನಾಟಕದ ಆಚರಣೆ:
ದಾವಣಗೆರೆ ಸಹಿತ ಮಧ್ಯ ಕರ್ನಾಟಕದಲ್ಲಿ ದೀಪಾವಳಿ ಆಚರಣೆ ವಿಶೇಷತೆಗಳಿಂದ ಕೂಡಿದೆ. ಇಲ್ಲಿ ಎತ್ತುಗಳ ಅಲಂಕಾರ ಹಾಗೂ ಮೆರವಣಿಗೆ ವಿಶೇಷ. ಎತ್ತುಗಳನ್ನು ಹಬ್ಬದ ದಿನ ಚೆನ್ನಾಗಿ ತೊಳೆದು ಅರಿಶಿಣವನ್ನು ಹಚ್ಚಲಾಗುತ್ತದೆ. ಆನಂತರ ಅಲಂಕಾರವನ್ನು ಮಾಡಲಾಗುತ್ತದೆ. ಜೋಡ ಎತ್ತುಗಳನ್ನು ನವ ವಧು ವರರಂತೆಯೇ ಅಲಂಕರಿಸಿ ಖುಷಿ ಪಡುತ್ತಾರೆ. ಆನಂತರ ಅವುಗಳನ್ನು ಊರಲ್ಲಿ ಮೆರವಣಿಗೆ ಮಾಡಲಾಗುತ್ತದೆ. ದೀಪಾವಳಿ ಹಬ್ಬದ ವೇಳೆ ಎತ್ತುಗಳಿಗೆ ಬಿಡುವು. ಯಾವುದೇ ಕೆಲಸ ಕೊಡದೇ ಅವುಗಳಿಗೆ ವಿರಾಮ ನೀಡುವುದು ಮೊದಲಿನಿಂದಲೂ ನಡದುಕೊಂಡು ಬಂದಿದೆ.

ಮಲೆ ನಾಡು ಭಾಗ:
ಕರ್ನಾಟಕದ ಮಲೆನಾಡು ಭಾಗವಾದ ಶಿವಮೊಗ್ಗ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆಚರಣೆ ಕೊಂಚ ಭಿನ್ನವೇ ಆಗಿದೆ. ಇಲ್ಲೆಲ್ಲಾ ಹುಲಿ ದೇವರ ಪೂಜೆ ಇರಲಿದೆ. ಹುಲಿ ದೇವರನ್ನು ಸಿದ್ದಪಡಿಸಿ ಪೂಜೆ ಸಲ್ಲಿಸಿ ಮೆರವಣಿಗೆ ಹೋಗುವ ಪರಂಪರೆಯ ಮುಂದುವರಿದಿದೆ. ಸಾಗರ, ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಈಗಲೂ ಹುಲಿ ದೇವರ ಪೂಜೆ ವಿಶೇಷ.

ಮಲೆನಾಡಿನ ಭಾಗದಲ್ಲೂ ಕೃಷಿ ಸಂಗಾತಿಗಳಾದ ರಾಸುಗಳು, ಎತ್ತುಗಳಿಗೆ ಅಲಂಕಾರ,ಪೂಜೆ, ಮೆರವಣಿಗೆಗಳು ನಡೆಯಲಿವೆ. ಸಿಂಗಾರಕ್ಕೆ ಕಾಳಜಿಯನ್ನು ವಹಿಸಲಾಗುತ್ತದೆ. ಈಗಲೂ ಮಲೆನಾಡಿನ ಹಳ್ಳಿಗಳಲ್ಲಿ ದೀಪಾವಳಿ ಬಂದರೆ ಆ ಖುಷಿಯೇ ಬೇರೆ.

ಕರಾವಳಿ ಸಂಸ್ಕೃತಿ:
ಕರಾವಳಿ ಭಾಗದಲ್ಲಿನ ದೈವ ಸಂಸ್ಕೃತಿ ದೀಪಾವಳಿಗೂ ವಿಸ್ತರಣೆಯಾಗುತ್ತದ. ಇಲ್ಲಿನ ಪರ್ಬ ಆಚರಣೆ ಸಂಸ್ಕೃತಿ ಈಗಲೂ ಇದೆ. ತುಳುವಿನಲ್ಲಿ ಪರ್ಬ ಕನ್ನಡದ ಹಬ್ಬ ಎನ್ನುವುದು ಇದರ ಅರ್ಥ. ಪರ್ಬವನ್ನು ವಿಶೇಷ ಪೂಜೆಗಳ ಮೂಲಕ ಆಚರಿಸುವುದು ಇದೆ. ಮೂರು ದಿನ ಕಾಲ ವಿಶೇಷ ಪೂಜೆಗಳು ಇರಲಿವೆ.

ಬಲೀಂದ್ರನನ್ನು ರೂಪಿಸಿ ಪೂಜೆ ಮಾಡುವುದು, ನೃತ್ಯದೊಂದಿಗೆ ಮನೆ ಮನೆಗಳಿಗೆ ಹೋಗಿ ಪೂಜೆ ಮಾಡಿಸುವ ಪದ್ದತಿಯೂ ಕೆಲವು ಭಾಗದಲ್ಲಿದೆ. ಮೀನುಗಾರರೂ ದೀಪಾವಳಿಗೆ ಮೀನು ಹಿಡಿಯಲು ಹೋಗದೇ ಹಬ್ಬ ಆಚರಿಸುತ್ತಾರೆ. ಅದರಲ್ಲೂ ಲಕ್ಷ್ಮಿ ಆರಾಧನೆ ಮೀನುಗಾರರ ಕುಟುಂಬದಲ್ಲಿ ಈಗಲೂ ದೀಪಾವಳಿ ಹಬ್ಬದಲ್ಲಿ ಇರಲಿದೆ.

ಉತ್ತರ ಕರ್ನಾಟಕದಲ್ಲಿ ಭಿನ್ನ:
ಉತ್ತರ ಕರ್ನಾಟಕ ಭಾಗದಲ್ಲಿ ದೀಪಾವಳಿ ಕೊಂಚ ಭಿನ್ನವೇ. ಇದನ್ನು ಹಟ್ಟಿ ಹಬ್ಬ ಎಂದಲೂ ಹಲವು ಭಾಗದಲ್ಲಿ ಕರೆಯಲಾಗುತ್ತದೆ. ಹಟ್ಟವನನ್ನು ಸೆಗಣಿ ಹಾಗೂ ಮಣ್ಣಿನಲ್ಲಿ ತಯಾರಿಸಿ ಪೂಜೆ ಸಲ್ಲಿಸಲಾಗುತ್ತದೆ. ಮನೆ ಬಾಗಿಲಿಗೂ ಇರಿಸಲಾಗುತ್ತದೆ. ದೀಪಾವಳಿ ಅಮಾವಾಸ್ಯೆಯ ಮರುದಿನ ಪಾಡ್ಯದಂದು ‘ಹಟ್ಟಿಹಬ್ಬ ಅಥವಾ ಗೂಳವ್ವನ ಹಬ್ಬ’ ಎಂದು ಆಚರಿಸುವುದು ಇದೆ. ಹಟ್ಟಿ ಎಂದರೆ ದನಕರುಗಳನ್ನು ಕಟ್ಟುವ ಸ್ಥಳ ಅಥವಾ ಕೊಟ್ಟಿಗೆ. ಇದನ್ನು ಕಾಯುವ ದೇವತೆಯೇ ಹಟ್ಟೆವ್ವ ಎನ್ನುವ ನಂಬಿಕೆ ಈಗಲೂ ಗ್ರಾಮೀಣ ಭಾಗದಲ್ಲಿದೆ. ಹಟ್ಟೆವ್ವನ ಪೂಜೆಯಾದರೆ ಗೋವುಗಳ ರಕ್ಷಣೆಯಾದಂತೆ ಎನ್ನುವುದು ಇದರ ಹಿಂದಿರುವ ಉದ್ದೇಶ.

ಲಂಬಾಣಿಗರ ಆಚರಣೆ:
ಕರ್ನಾಟಕದಲ್ಲಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಮಲೆನಾಡು ಭಾಗದಲ್ಲಿ ಲಂಬಾಣಿಗರು ನೆಲೆಸಿದ್ದಾರೆ. ಈ ಸಮುದಾಯದಲ್ಲಿ ದೀಪಾವಳಿ ಆಚರಣೆಯ ಸಂಪ್ರದಾಯವೇ ಇದೆ. ಪೂಜೆ ಸಲ್ಲಿಸುವುದು, .ಬಂಜಾರ ಸಮುದಾಯದ ಹಳೆಯ ಪದ್ದತಿ ಸಂಸ್ಕೃತಿಯನ್ನು ಹೊಂದಿರುವ ವೇಷಭೂಷಣಗಳನ್ನು ತೊಟ್ಟು ಲಂಬಾಣಿ ಭಾಷೆ ಹಾಡಿನೊಂದಿಗೆ ನೃತ್ಯವನ್ನು ಮಾಡುತ್ತಾ ಆನಂದಿಸುವುದು ಇದೆ. ಯುವತಿಯರು ಇದರಲ್ಲಿ ಹೆಚ್ಚು ಭಾಗಿಯಾಗುತ್ತಾರೆ. ಕಲಬುರಗಿ, ವಿಜಯಪುರ, ಬಾಗಲಕೋಟೆ, ವಿಜಯನಗರ, ದಾವಣಗೆರೆ, ಹಾವೇರಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಇದನ್ನು ಕಾಣಬಹುದು. ಲಂಬಾಣಿ ಸಮುದಾಯದಲ್ಲೀ ಈಗಾಗಲೇ ದೀಪಾವಳಿ ಸಡಗರ ಮನೆ ಮಾಡಿದೆ.

Leave a Comment

Your email address will not be published. Required fields are marked *