ಸಮಗ್ರ ನ್ಯೂಸ್: ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಲ್ಲೆ ಸಿಲುಕಿದ್ದಾರೆ ಎಂಬ ವರದಿಗಳು ಈ ಹಿಂದೆ ಬಂದಿತ್ತು. ಆದರೆ ಇದೀಗ ನಾಸಾ ಇನ್ನೊಂದು ಅಧೀಕೃತ ಮಾಹಿತಿಯೊಂದನ್ನು ನೀಡಿದೆ. ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಂಡ ಸುನೀತಾ ವಿಲಿಯಮ್ಸ್ ಹಾಗೂ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ ಅವರು 2025ರ ಫೆಬ್ರವರಿಯಲ್ಲಿ ವಾಪಸಾಗಲಿದ್ದಾರೆ ಎಂದು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ (NASA) ತಿಳಿಸಿದೆ.
ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಜೂನ್ 5ರಂದು ಆರಂಭಿಸಿದ್ದರು. ಜೂನ್ 6ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್ ತಲುಪಿದ್ದ ಅವರು ಒಂದು ವಾರ ಸಂಶೋಧನೆ ನಡೆಸಿ ವಾಪಸಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದ ಅವರು ಅಲ್ಲಿಯೇ ಸಿಲುಕಿದ್ದಾರೆ. ಇವರು ಯಾವಾಗ ಬರುತ್ತಾರೆ ಎಂಬುದರ ಕುರಿತು ನಾಸಾ ಈಗ ಮಾಹಿತಿ ನೀಡಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿರುವ ಸುನೀತಾ ವಿಲಿಯಮ್ಸ್ ಅವರು 2025ರ ಫೆಬ್ರವರಿಯಲ್ಲಿ ವಾಪಸಾಗಲಿದ್ದಾರೆ. ಇವರು ಬೋಯಿಂಗ್ ಸ್ಟಾರ್‌ಲೈನರ್ ಬದಲು ಸ್ಪೇಸ್‌ಎಕ್ಸ್‌ನ ಕ್ರ್ಯೂ ಡ್ರ್ಯಾಗನ್‌ನಲ್ಲಿ ವಾಪಸಾಗಲಿದ್ದಾರೆ. ಸ್ಟಾರ್‌ಲೈನರ್‌ನಲ್ಲಿ ಹಲವು ತಾಂತ್ರಿಕ ದೋಷಗಳು ಉಂಟಾಗಿರುವ ಕಾರಣ ಕ್ರ್ಯೂ ಡ್ರ್ಯಾಗನ್‌ನಲ್ಲಿ ಕರೆದುಕೊಂಡು ಬರಲು ತೀರ್ಮಾನಿಸಲಾಗಿದೆ” ಎಂಬುದಾಗಿ ನಾಸಾ ತಿಳಿಸಿದೆ.