ಸಮಗ್ರ ನ್ಯೂಸ್: ಕೂಡಿಗೆ ಕ್ರೀಡಾ ಶಾಲೆಯಲ್ಲಿ ಇಂದಿನಿಂದ ಆರಂಭವಾದ 67ನೇ ವರ್ಷದ ರಾಷ್ಟ್ರ ಮಟ್ಟದ 17 ವರ್ಷದ ಬಾಲಕಿಯರ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಮಂತರ ಗೌಡರವರು ಮಾತನಾಡಿ ಕೊಡಗಿನಲ್ಲಿ ಕ್ರೀಡೆಗೆ ಹೆಚ್ಚು ಒತ್ತು ನೀಡಲಾಗಿದೆ. ಕೊಡಗು ಹಾಕಿ ಕ್ರೀಡೆಯಲ್ಲಿ ಹೆಸರುವಾಸಿ ಆಗಿದ್ದು ಯುವಪ್ರತಿಭೆಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಇಂದು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಕೊಡಗಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಇಲ್ಲಿ ಭಾಗವಹಿಸುತ್ತಿರುವ ಎಲ್ಲಾ ತಂಡಗಳು ಕೂಡ ಉತ್ತಮವಾಗಿ ಪ್ರದರ್ಶನವನ್ನು ನೀಡಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಂತೆ ಕರೆ ನೀಡಿದರು.
ವಿರಾಜಪೇಟೆ ತಾಲೂಕು ಶಾಸಕರು ಮತ್ತು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣರವರು ಕಾರ್ಯಕ್ರಮದಲ್ಲಿ ಮಾತನಾಡಿ ಹಾಕಿಯ ತವರೂರು ಕೊಡಗು ಇಂದು ವಿವಿಧ 27 ರಾಜ್ಯಗಳಿಂದ ವಿದ್ಯಾರ್ಥಿನಿಯರು ಆಗಮಿಸಿದ್ದು ಎಲ್ಲರೂ ಉತ್ತಮವಾಗಿ ಆಟ ಅಡಿ ಸೋಲು ಮತ್ತು ಗೆಲುವು ಸಮನಾಗಿ ಸ್ವೀಕರಿಸಿ ಸೋತವರು ಮುಂದೆ ಒಂದು ದಿನ ಗೆಲ್ಲಬಹುದು. ಇದಕ್ಕೆ ಕ್ರೀಡಾ ಮನೋಭಾವನೆ ಎಂದು ಹೇಳುವುದು. ಇಲ್ಲಿಗೆ ಆಗಮಿಸಿರುವ ವಿವಿಧ ರಾಜ್ಯದ ತಂಡಗಳಿಗೆ ಶುಭ ಹಾರೈಸಿ, ಜಿಲ್ಲಾಡಳಿತ ಕ್ರೀಡಾ ಆಯೋಜನೆಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರ ಮಟ್ಟದ 17 ವರ್ಷ ವಯೋಮಿತಿಯ ಬಾಲಕಿಯರ ಹಾಕಿ ಪಂದ್ಯಾವಳಿಗೆ ಮೊದಲಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕ್ರೀಡಾ ಶಾಲೆ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿ ನಂತರ ಸಮಾರಂಭದಲ್ಲಿ ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟನೆ ಮಾಡಿದರು.
ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷ ಭಾಸ್ಕರ ನಾಯ್ಕ ಕೂಡಿಗೆ ಗ್ರಾ.ಪಂ. ಅಧ್ಯಕ್ಷ ಗಿರೀಶ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪ ವಿಭಾಗಾಧಿಕಾರಿ ವಿನಾಯಕ್ ನರ್ವಾಡೆ, ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ಆಯುಕ್ತರ ಕಚೇರಿಯ ನಿರ್ದೇಶಕ ಬಿ.ಎಸ್.ರಘುವೀರ್, ಜಂಟಿ ನಿರ್ದೇಶಕ(ದೈಹಿಕ ಶಿಕ್ಷಣ) ಎಸ್.ಎನ್.ರಮೇಶ್, ಮೈಸೂರು ವಿಭಾಗದ ಶಾಲಾ ಶಿಕ್ಷಣ ಇಲಾಖೆ ವಿಭಾಗೀಯ ಕಾರ್ಯದರ್ಶಿ ಹಾಗೂ ಸಹ ನಿರ್ದೇಶಕ ಪಾಂಡುರಂಗ, ಮೈಸೂರು ಸಿಟಿಇ ಪ್ರಾಂಶುಪಾಲರು ಹಾಗೂ ಸಹ ನಿರ್ದೇಶಕ ಗೀತಾಂಭ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಚಂದ್ರಕಾಂತ್, ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ.ಸದಾಶಿವಯ್ಯ ಪಲ್ಲೇದ್ ಉಪಸ್ಥಿತರಿದ್ದರು.