ಸಮಗ್ರ ವಾರ್ತೆ: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ರುದ್ರ ನರ್ತನದಿಂದ ಬದುಕು ಮೂರಾಬಟ್ಟೆಯಾಗಿದೆ. ಇಡೀ ಕರಾವಳಿಯನ್ನು ಮಳೆ ಆಪೋಷನ ಪಡೆದಿದ್ದು ಎಲ್ಲೆಂದರಲ್ಲಿ ಜಲರಾಶಿಯೇ ಕಂಡುಬರುತ್ತಿದೆ.
ಈ ನಡುವೆ ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತ ಮತ್ತು ರಸ್ತೆ ಕುಸಿತವೂ ಆರಂಭವಾಗಿದ್ದು, ಅಪಾಯ ಎದುರಾಗಿದೆ. ಮುಂಜಾಗ್ರತಾ ಕ್ರಮವಾಗಿ ಹಲವು ಜಿಲ್ಲೆಗಳಲ್ಲಿ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕಲ್ಲಪ್ಪಳ್ಳಿಯಲ್ಲಿ ರಸ್ತೆ ಮೇಲೆ ಗುಡ್ಡ ಕುಸಿತದ ಪರಿಣಾಮ ಸಂಚಾರ ಬಂದ್ ಆಗಿದೆ. ಸುಳ್ಯದಿಂದ ಕೇರಳದ ಪಾಣತ್ತೂರು ಸಂಪರ್ಕಿಸುವ ರಸ್ತೆ ಇದಾಗಿದ್ದು, ಸಂಚಾರಕ್ಕೆ ಅನುವು ಮಾಡಿಕೊಡಲು ಮಣ್ಣು ತೆರವು ಕಾರ್ಯ ನಡೆದಿದೆ. ಮುತ್ತುಕೋಡಿ ಬಳಿ ಕೂಡಾ ಗುಡ್ಡ ಕುಸಿದಿದ್ದು, ಇಲ್ಲೂ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಮಾವಿನಕಟ್ಟೆ- ಮಂಡೆಕೋಲು ಸಂಪರ್ಕ ಕಡಿತವಾಗಿದೆ.
ಭಾರಿ ಮಳೆಯಿಂದಾಗಿ ಕಳಸ-ಕುದುರೆಮುಖ ಹೆದ್ದಾರಿಯಲ್ಲಿ ರಸ್ತೆ ಬಿರುಕು ಬಿಟ್ಟಿದೆ. ಮಳೆ ಹೆಚ್ಚಾಗುತ್ತಿದ್ದಂತೆ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕ್ಷಣ ಕ್ಷಣಕ್ಕೂ ಅದು ತೆರೆದುಕೊಳ್ಳುತ್ತಿದೆ. ಕಳೆದ ವರ್ಷವೂ ಇದೇ ಭಾಗದಲ್ಲಿ ರಸ್ತೆ ಕುಸಿತ ಕಾಣಿಸಿಕೊಂಡಿತ್ತು. ಕಳಸ-ಕುದುರೆಮುಖ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ವಾಹನ ಸವಾರರಿಗೆ ಆತಂಕ ಎದುರಾಗಿದೆ. ಇದು ಕಳಸ- ಕುದುರೆಮುಖ- ಮಂಗಳೂರು ಸಂಪರ್ಕಿಸುವ ರಸ್ತೆಯಾಗಿದ್ದು ಸಂಚಾರಕ್ಕೆ ತಡೆ ಒಡ್ಡಲು ಚಿಂತನೆ ನಡೆದಿದೆ.
ಶೃಂಗೇರಿ ತಾಲೂಕಿನ ಮೆಗಲು ಬೈಲು ಗ್ರಾಮದಲ್ಲಿ ಮನೆಯ ಮುಂದಿನ ಧರೆ ಕುಸಿದು ಆರು ಮನೆಗಳಿಗೆ ಆತಂಕ ಎದುರಾಗಿದೆ. ಗ್ರಾಮ ಪಂಚಾಯಿತಿಯಿಂದ ರಸ್ತೆ ನಿರ್ಮಾಣದ ವೇಳೆ ಮಣ್ಣು ತೆಗೆಯಲಾಗಿತ್ತು. ಇದೇ ರಸ್ತೆಯ ಮತ್ತೊಂದು ಕಡೆ ಭೂಮಿ ಕುಸಿದಿದೆ. ಎರಡರಿಂದ ಮೂರು ಕಡೆ ಭೂಮಿ ಬಿರುಕು ಬಿಟ್ಟಿದೆ. ಸ್ಥಳಕ್ಕೆ ಶೃಂಗೇರಿ ತಹಸೀಲ್ದಾರ್ ಗೌರಮ್ಮ ಹಾಗೂ ಆರ್.ಐ ಜಗದೀಶ್ ಭೇಟಿ ನೀಡಿದ್ದಾರೆ.
ಒಂದು ವಾರದ ಹಿಂದಿನವರೆಗಷ್ಟೇ ಬರಗಾಲದ ಪರಿಸ್ಥಿತಿ ಎದುರಾಗಿದೆ ಎನ್ನುತ್ತಿದ್ದ ಜಿಲ್ಲೆಯಲ್ಲಿ ನದಿ, ಹಳ್ಳ, ಕೊಳ್ಳಗಳು ಮೈದುಂಬಿ ಭೋರ್ಗರೆದು ಹರಿಯುತ್ತಿವೆ. ಕಳೆದ 24 ಗಂಟೆಯಲ್ಲಿ ಬರೋಬ್ಬರಿ 140 ಮಿಲಿ ಮೀಟರ್ ಮಳೆ ಸುರಿದ ಪರಿಣಾಮ ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆಯಾಗಿದೆ.
ಅದರಲ್ಲೂ ಭಾಗಮಂಡಲ, ತಲಕಾವೇರಿ ಮತ್ತು ಬ್ರಹ್ಮಗಿರಿ ಬೆಟ್ಟ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆಯಿಂದ ಗುರುವಾರ ಬೆಳಿಗ್ಗೆವರೆಗೆ ಧಾರಕಾರವಾಗಿ ಮಳೆ ಸುರಿದಿದೆ. 24 ಗಂಟೆಯಲ್ಲಿ ಬರೋಬ್ಬರಿ 140 ಮಿಲಿ ಮೀಟರ್ ಮಳೆ ಸುರಿದಿದೆ. ಪರಿಣಾಮ ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆಯಾಗಿದೆ. ಪಿಂಡ ಪ್ರದಾನ ಮಾಡಿ ಸ್ನಾನ ಮಾಡುತ್ತಿದ್ದ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ರಭಸವಾಗಿ ನೀರು ಹರಿಯುತ್ತಿದ್ದು, ಬೃಹತ್ ಘಾತ್ರದ ಮರಗಳು ತೇಲಿ ಹೋಗಿವೆ.
ಇನ್ನೂ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರೀ ಮಳೆ ಸುರಿಯುವ ಸಾಧ್ಯತೆ ಹಿನ್ನಲೆಯಲ್ಲಿ ಶುಕ್ರವಾರ ಜಿಲ್ಲೆಯ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮಳೆ ಸಂಬಂಧಿ ಅವಘಡದಲ್ಲಿ ಮತ್ತೆ ಇಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗೆ ಮೂವರು ಸಾವನ್ನಪಿದವರ ಸಂಖ್ಯೆ 3 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಹಲವು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ಪರಿಣಾಮ ನದಿ ತೊರೆಗಳು ಮೈದುಂಬಿ ಹರಿಯುತ್ತಿವೆ. ಹಲವೆಡೆ ನೆರೆ ಭೀತಿ ಎದುರಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ. ಉಳ್ಳಾಲ, ಸುರತ್ಕಲ್ ನಲ್ಲಿ ಕಡಲ್ಕೊರೆತವೂ ಜೋರಾಗಿದೆ. ಮುಂಜಾಗ್ರತಾ ಕ್ರಮವಾಗಿ ಎರಡೂ ಜಿಲ್ಲೆಯಲ್ಲಿ ಶಾಲೆ ಹಾಗೂ ಪಿಯುಸಿ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಒಟ್ಟಾರೆ ರಾಜ್ಯದಲ್ಲಿ ಹಲವೆಡೆ ಮಳೆ ಅಬ್ಬರಿಸುತ್ತಿದ್ದು ಜು. 10ರವರೆಗೂ ವರ್ಷಧಾರೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.