Ad Widget .

ಸುಳ್ಯ: ರಾಜ್ಯದ ಏಕೈಕ ಪ.ಜಾತಿ ಮೀಸಲು ಕ್ಷೇತ್ರ ಸುಳ್ಯದಲ್ಲಿ ಬದಲಾವಣೆಯ ಗಾಳಿ? ಸಚಿವ ಅಂಗಾರರ ಕಾರ್ಯವೈಖರಿಗೆ ಬಿಜೆಪಿಯಲ್ಲೇ ಇದೆ ಅಸಮಾಧಾನದ ಹೊಗೆ! ಕ್ಷೇತ್ರಾಭಿವೃದ್ಧಿಗೆ ಯೋಜನೆ ಹಾಕದ ಹಾಲಿ ಶಾಸಕರಿಗೆ ಸಿಗುತ್ತಾ ಕೋಕ್? ಕಂಪ್ಲೀಟ್ ಸ್ಟೋರಿ ಓದಿ…

ಸಮಗ್ರ ನ್ಯೂಸ್: 1972ರಲ್ಲಿ ಪುತ್ತೂರು ದ್ವಿ ಸದಸ್ಯ ಕ್ಷೇತ್ರದಿಂದ ಪ್ರತ್ಯೇಕಗೊಂಡು ಪರಿಶಿಷ್ಟ ಜಾತಿಯವರಿಗೆ ಮಾತ್ರ ಸ್ಪರ್ಧೆಗೆ ಮೀಸಲಾಗಿರುವ ಏಕೈಕ ಕ್ಷೇತ್ರ ಸುಳ್ಯ ವಿಧಾನಸಭಾ ಕ್ಷೇತ್ರ. ಕ್ಷೇತ್ರ ವಿಂಗಡಣೆಯಾದ ಬಳಿಕ 1985, 89ರ ಚುನಾವಣೆಯಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತಾದರೂ 1994ರಲ್ಲಿ ಕ್ಷೇತ್ರ ಬಿಜೆಪಿ ತೆಕ್ಕೆಗೆ ಬಂತು. ನಂತರದ ದಿನಗಳಲ್ಲಿ ಒಮ್ಮೆಯೂ ಇಲ್ಲಿ ಬಿಜೆಪಿ ಸೋತ ಇತಿಹಾಸವಿಲ್ಲ. 1994, 1999, 2004, 2008, 2013, 2018 ಹೀಗೆ ಸತತ 6 ಚುನಾವಣೆಗಳಲ್ಲಿ ಬಿಜೆಪಿಯ ಎಸ್ ಅಂಗಾರ (S Angara) ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನು 2013ರಲ್ಲಿ ದಕ್ಷಿಣ ಕನ್ನಡದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಸೋತಾಗ ಗೆದ್ದ ಏಕೈಕ ಕಮಲ ಪಕ್ಷದ ಅಭ್ಯರ್ಥಿ ಅಂದರೆ ಎಸ್.ಅಂಗಾರ.

Ad Widget . Ad Widget .

2013ರಲ್ಲಿ ತಮ್ಮ ಗೆಲುವಿನ ಮೂಲಕ ಕರಾವಳಿ ಜಿಲ್ಲೆಯಲ್ಲಿ ಅವರು ಬಿಜೆಪಿಯ ಮಾನ ಉಳಿಸಿದ್ದರು. ಮೀಸಲು ಕ್ಷೇತ್ರದಲ್ಲಿ ಕೇಸರಿ ಪಡೆ ನಿರಂತರವಾಗಿ ಜಯ ದಾಖಲಿಸಿಕೊಳ್ಳುತ್ತಿದ್ದರೂ, ಇತ್ತ ಕಾಂಗ್ರೆಸ್ ಸೋಲಿಲ್ಲದ ಸರದಾರ ಅಂಗಾರರನ್ನು ಸೋಲಿಸಲು ತುದಿಗಾಲಿಲ್ಲ ನಿಂತಿದೆ. ಈ ನಿಟ್ಟಿನಲ್ಲಿ ಈ ಚುನಾವಣೆಯಲ್ಲಿ ವಿರೋಧ ಪಕ್ಷವೂ ಈ ಕ್ಷೇತ್ರದಲ್ಲಿ ಬಲೆ ಹೆಣೆಯಲಾರಂಭಿಸಿದ್ದು, ಜನ ಸಾಮಾನ್ಯರ ಗಮನ ಸೆಳೆಯಲು ಪ್ಲಾನ್ ಮಾಡಿದೆ. ಮೂರೂವರೆ ದಶಕಗಳ ಬಳಿಕ ಬಿಜೆಪಿ ಹಾಗೂ ಎರಡು ದಶಕದ ಬಳಿಕ ಕಾಂಗ್ರೆಸ್ ಹೊಸ ಮುಖ ಕಣಕ್ಕಿಳಿಸುವ ಯೋಚನೆ ಮಾಡಿದ್ದು, ಎರಡೂ ಪಕ್ಷಗಳು ಗೆಲುವಿನ ನಿರೀಕ್ಷೆಯಲ್ಲಿವೆ.

Ad Widget . Ad Widget .

ಅಭ್ಯರ್ಥಿಗಳಿಗಾಗಿಯೇ ಹುಡುಕಾಟ ನಡೆಸಬೇಕಿದ್ದ ಕ್ಷೇತ್ರದಲ್ಲೀಗ ಪ್ರಮುಖ ಎರಡು ಪಕ್ಷಗಳಲ್ಲಿ ಆಕಾಂಕ್ಷಿಗಳ ದಂಡೇ ತುಂಬಿದೆ. ಹೀಗಾಗಿ ಹೈಕಮಾಂಡ್‍ಗೆ ಅಭ್ಯರ್ಥಿ ಹೆಸರು ಅಂತಿಮ ಮಾಡುವುದೇ ದೊಡ್ಡ ಸವಾಲಾಗಿದೆ. 35 ವರ್ಷಗಳ ಹಿಂದೆ ಕಾಂಗ್ರೆಸ್ ಭದ್ರಕೋಟೆಯನ್ನು ಕೆಡವಲು ಬಿಜೆಪಿ ಪ್ರಯೋಗಿಸಿದ್ದು ತರುಣ ಅಭ್ಯರ್ಥಿ ಪ್ರಯೋಗ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ 27 ವರ್ಷದ ಅಂಗಾರ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿತ್ತು. 1989ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‍ನ ಕುಶಲ ಅವರ ವಿರುದ್ಧ ಅಂಗಾರ ಸೋತರೂ 1994ರಿಂದ 2018ರ ತನಕ ನಿರಂತರ ಗೆಲುವು ದಾಖಲಿಸಿದ್ದಾರೆ. ಆದರೆ ಅಂಗಾರ ಅವರ ಕಾರ್ಯವೈಖರಿ ಬಗ್ಗೆ ಜನಸಾಮಾನ್ಯರಿಗಷ್ಟೆ ಅಲ್ಲ, ಸಂಘ ಪರಿವಾರ ಮತ್ತು ಬಿಜೆಪಿ ಬಿಡಾರದಲ್ಲಿಯೂ ಅಸಮಾಧಾನದ ಹೊಗೆಯಾಡುತ್ತಿದೆ ಎನ್ನಲಾಗಿದೆ.

ಸುಳ್ಯ- ಕಡಬದ ಭೌಗೋಳಿಕ ಸ್ಥಿತಿಗತಿ, ಜನಜೀವನದ ನಾಡಿಮಿಡಿತವೇ ತಿಳಿಯದ ಶಾಸಕ ಅಂಗಾರ ತಮ್ಮ 28 ವರ್ಷಗಳ ಶಾಸಕತ್ವದ ಈ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಒಂದು ಯೋಜನೆಯನ್ನೂ ಹಾಕಿಕೊಂಡಿಲ್ಲ ಎಂಬ ಅಸಮಾಧಾನವೂ ಜನರಲ್ಲಿದೆ. ಹೀಗಾಗಿ ಸತತ ಗೆಲುವನ್ನೇ ಕಂಡಿರುವ ಅಂಗಾರರನ್ನು ಬದಲಿಸಬೇಕೆಂಬ ಕೂಗು ಕೇಳಿಬರುತ್ತಿದ್ದು, ಈ ಬಾರಿ ಬಿಜೆಪಿ ಹಾಲಿ ಶಾಸಕ ಹಾಗೂ ಸಚಿವ ಎಸ್.ಅಂಗಾರರನ್ನು ಬದಲಾಯಿಸಿ ಮತ್ತೆ ತರುಣ ಅಭ್ಯರ್ಥಿ ಕಣಕ್ಕಿಳಿಸುವ ಪ್ರಯೋಗ ಮಾಡುವ ಸಾಧ್ಯತೆ ಇದೆ ಎನ್ನುವುದು ಸದ್ಯದ ಮಾತು.

2013ರಲ್ಲಿ ದ.ಕ. ಜಿಲ್ಲೆಯಲ್ಲಿನ 8 ಸ್ಥಾನಗಳ ಪೈಕಿ ಬಿಜೆಪಿ 7ರಲ್ಲಿ ಸೋತಿತ್ತು. ಇನ್ನೇನು ಸೋತೇ ಬಿಟ್ಟಿತು ಎಂದು ಭಾವಿಸಲಾಗಿದ್ದ ಸುಳ್ಯ ಕ್ಷೇತ್ರದಲ್ಲಿ ಗೆಲುವು ದಾಖಲಿಸಿ ಬಿಜೆಪಿ ಭದ್ರಕೋಟೆ ಅನ್ನುವುದನ್ನು ಸಾಬೀತುಪಡಿಸಿತು. ಇಲ್ಲಿ ಬಿಜೆಪಿಯ ಭವಿಷ್ಯ ಇರುವುದು ಸಂಘ ಮತ್ತು ಪಕ್ಷದ ಕೈಯಲ್ಲಿ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಪ್ರಕಟಗೊಳ್ಳುವುದೇ ಇಲ್ಲಿ ಅಪರೂಪ. ಸಂಘ ಸೂಚಿಸುವ ವ್ಯಕ್ತಿಯೇ ಇಲ್ಲಿ ಅಭ್ಯರ್ಥಿಯಾಗುವುದು ಈ ತನಕದ ಪರಿಪಾಠ. ಒಂದು ವೇಳೆ ಅಂಗಾರ ಅವರನ್ನು ಬದಲಾಯಿಸಿ ಹೊಸ ಮುಖಕ್ಕೆ ಅವಕಾಶ ನೀಡುವುದಿದ್ದರೆ ಮೊದಲ ಹೆಸರು ಕೇಳಿ ಬರುತ್ತಿರುವುದು ಬಿಜೆಪಿ ಎಸ್‍ಸಿ/ಎಸ್ಟಿ ಮೋರ್ಚಾದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ದಿನೇಶ್ ಅಮ್ಟೂರು ಅವರ ಹೆಸರು.

ಮೀಸಲಾತಿ ಹಿನ್ನೆಲೆಯಲ್ಲಿ, ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಆಪ್ತರೂ ಆಗಿರುವ ದಿನೇಶ್ ಅವರನ್ನು ಹೊಸ ಮುಖವನ್ನಾಗಿ ಪರಿಚಯಿಸಲು ಪಕ್ಷ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಕೆಲವು ಆಕಾಂಕ್ಷಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗ್ರೂಪ್ ರಚಿಸಿ ಆಕಾಂಕ್ಷೆ ತೋರ್ಪಡಿಸುತ್ತಿದ್ದಾರೆ. ಈ ಮಧ್ಯೆ ಸುಳ್ಯ ಕ್ಷೇತ್ರಕ್ಕೆ ಹೊರಗಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಾರದು ಎಂದು ಆಗ್ರಹಿಸಿ ಸುಳ್ಯದ ದಲಿತ ಮುಖಂಡರು ಪತ್ರಿಕಾಗೋಷ್ಠಿ ನಡೆಸಿರುವುದು ಕೂಡ ಗಮನಾರ್ಹ ಸಂಗತಿ.

ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸತತ 4 ಬಾರಿ ಸೋತಿರುವ ಡಾ. ರಘು ಅವರು ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದಾರೆ. ಅವರ ಪುತ್ರರಾದ ಪ್ರಹ್ಲಾದ್, ಅಭಿಷೇಕ್ ಅವರು ಟಿಕೆಟ್ ಆಕಾಂಕ್ಷೆ ವ್ಯಕ್ತಪಡಿಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ಕೆಪಿಸಿಸಿ ಹಾಸನ ಮೂಲದ ಜಿ. ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಿದೆ. ಈ ಮೂಲಕ ಕಾಂಗ್ರೆಸ್‍ನಲ್ಲಿ ಹೊಸಮುಖ ಪರಿಚಯವಾಗಿದೆ. ಬಿಜೆಪಿಯೂ ಇದೇ ಹಾದಿ ತುಳಿಯುತ್ತಾ ಅನ್ನೋದು ಕುತೂಹಲದ ಬಿಂದುವಾಗಿದೆ. ಇನ್ನೇನು ಈ ಕುತೂಹಲಕ್ಕೆ ಒಂದೆರಡು ದಿನಗಳಲ್ಲಿ ಉತ್ತರ ಸಿಗಲಿದ್ದು, ಹಾಲಿ ಶಾಸಕ ಎಸ್.ಅಂಗಾರ ಮತ್ತೆ ಟಿಕೆಟ್ ಗಿಟ್ಟಿಸಿಕೊಳ್ಳುತ್ತಾರಾ? ಅಥವಾ ಹೊಸ ಮುಖವನ್ನು ಬಿಜೆಪಿ ಕಣಕ್ಕಿಳಿಸುತ್ತಾ? ಕಾದುನೋಡಬೇಕಿದೆ.

Leave a Comment

Your email address will not be published. Required fields are marked *