ಸಮಗ್ರ ನ್ಯೂಸ್: ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತಂದು, ಕಲಿಕೆ ಯತ್ತ ಆಕರ್ಷಿಸಲು ಇಲ್ಲೊಂದು ಗ್ರಾಮದಲ್ಲಿ ‘ಡಿಜಿಟಲ್ ಲಾಕ್‌ಡೌನ್’ ಘೋಷಿಸಲಾಗಿದೆ. ನಿತ್ಯ ಸಂಜೆ 7ರಿಂದ 8.30ರವರೆಗೆ ಮೊಬೈಲ್, ಟಿ.ವಿ ಬಳಕೆ ನಿಷೇಧಿಸಲಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಾಡೇಗಾಂವ್ ತಾಲ್ಲೂಕಿನ ಮೋಹಿತೆ ವಡಗಾಂವ ಗ್ರಾಮಸ್ಥರು ಇಂತಹ ನಿರ್ಣಯ ಕೈಗೊಂಡಿದ್ದಾರೆ. ಆ.14ರಿಂದ ಹೊಸ ಪದ್ಧತಿ ಜಾರಿಯಾಗಿದ್ದು, ಸಂಜೆ ಹೊತ್ತಿನಲ್ಲಿ ಮಕ್ಕಳು ಮೊಬೈಲ್ ಬದಿಗಿರಿಸಿ ಅಭ್ಯಸಿಸುತ್ತಿದ್ದಾರೆ. ಗ್ರಾಮದ ಜನಸಂಖ್ಯೆ ಸುಮಾರು 3 ಸಾವಿರ. 450 ಮಕ್ಕಳು ತಮ್ಮೂರಿನಲ್ಲೇ 1ರಿಂದ 10ನೇ ತರಗತಿಯಲ್ಲಿ ಓದುತ್ತಿದ್ದಾರೆ.
‘ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರು. ಅನಗತ್ಯವಾಗಿ ಮೊಬೈಲ್ ಬಳಸುತ್ತಿದ್ದರು. ಸರಿಯಾಗಿ ಅಭ್ಯಸಿಸುತ್ತಿಲ್ಲ ಎಂಬ ದೂರು ಇತ್ತು. ಹೀಗಾಗಿ, ಗ್ರಾಮದ ಹಿರಿಯರೆಲ್ಲ ಸೇರಿ ಚರ್ಚಿಸಿ, ನಿತ್ಯ ಒಂದೂವರೆ ತಾಸು ಮೊಬೈಲ್, ಟಿ.ವಿ ಬಳಕೆಗೆ ನಿರ್ಬಂಧ ಹೇರುವ ನಿರ್ಣಯವನ್ನು ಗ್ರಾಮ ಪಂಚಾಯಿತಿ ಸಭೆಯಲ್ಲಿ ಕೈಗೊಂಡೆವು. ಜೊತೆಗೆ ವಾರ್ಡ್‌ವಾರು ಸಮಿತಿ ರಚಿಸಿ, ಜನರಲ್ಲಿ ಜಾಗೃತಿ ಮೂಡಿಸಿದೆವು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ತಿಳಿಸಿದ್ದಾರೆ.
‘ಗ್ರಾಮದೇವರಾದ ಭೈರವನಾಥ ಮಂದಿರದ ಮೇಲೆ ಸೈರನ್ ಅಳವಡಿಸಲಾಗಿದೆ. ಸಂಜೆ 7ಕ್ಕೆ ಅದನ್ನು ಬಾರಿಸಿದ ಕೂಡಲೇ ಜನರು ಮೊಬೈಲ್ ಬದಿಗಿರಿಸಿ ಮನೆಯಲ್ಲಿ ಟಿ.ವಿ ಬಳಕೆ ನಿಲ್ಲಿಸುತ್ತಾರೆ. ಮಕ್ಕಳೆಲ್ಲ ಮನೆಯಲ್ಲಿ ಅಭ್ಯಾಸ ಮಾಡುತ್ತಾರೆ’ ಎಂದರು.
‘ಈ ಅವಧಿಯಲ್ಲಿ ಜನರೂ ಟಿ.ವಿ ನೋಡದೆ, ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಚರ್ಚೆಯಲ್ಲಿ ತೊಡಗುತ್ತಾರೆ. ಎರಡು ತಿಂಗಳಿಂದ ಇದನ್ನು ಅನುಸರಿಸುತ್ತಿರುವುದರಿಂದ ಮಕ್ಕಳ ಕಲಿಕೆಯಲ್ಲಿ ಸುಧಾರಣೆ ಕಂಡುಬಂದಿದೆ’ ಎಂದು ತಿಳಿದುಬಂದಿದೆ.