ತಿರುವನಂತಪುರಂ: ತೀರ್ಥಕ್ಷೇತ್ರ ಶಬರಿಮಲೆಯಲ್ಲಿ ನವೆಂಬರ್ 16 ರಿಂದ ಮಂಡಲ-ಮಕರವಿಳಕ್ಕು ಕಾರ್ಯಕ್ರಮ ನಡೆಯಲಿರುವುದರಿಂದ ಕೇರಳ ಸರಕಾರವು ಯಾತ್ರಿಗಳಿಗೆ ಸಲಹೆ ನೀಡಿದ್ದು, ಭಕ್ತಾದಿಗಳ ದರ್ಶನಕ್ಕೆ ದೈನಂದಿನ ಮಿತಿ ನಿಗದಿಪಡಿಸಿದೆ. ಪ್ರಾರಂಭದ ದಿನಗಳಲ್ಲಿ ದೈನಂದಿನ 25 ಸಾವಿರ ಮಂದಿ ಭಕ್ತಾದಿಗಳಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆ ನೀಡಿದ್ದಾರೆ.
“ಒಂದು ವೇಳೆ ಭಕ್ತಾದಿಗಳ ಸಂಖ್ಯೆಯಲ್ಲಿ ಏನಾದರೂ ಏರಿಳಿತಗಳನ್ನು ಮಾಡಬೇಕಾದ ಅವಶ್ಯಕತೆ ಉಂಟಾದಲ್ಲಿ ಆ ಕುರಿತು ಚರ್ಚೆ ನಡೆಸಿದ ಬಳಿಕ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ಅವರು ಹೇಳಿಕೆ ನೀಡಿದ್ದಾರೆ. ತೀರ್ಥಯಾತ್ರೆ ಪ್ರಾರಂಭಗೊಳ್ಳುವ ಮೊದಲು ಪರಿಸ್ಥಿತಿ ಅವಲೋಕನ ನಡೆಸಲು ನಡೆದ ಸಭೆಯಲ್ಲಿ ಈ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ದೇವಸ್ಯಂ, ಸಾರಿಗೆ, ಅರಣ್ಯ, ಆರೋಗ್ಯ ಮತ್ತು ಜಲ ಸಂಪನ್ಮೂಲಗಳ ರಾಜ್ಯ ಮಂತ್ರಿಗಳು ಹಾಗೂ ರಾಜ್ಯ ಪೊಲೀಸ್ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.
ಕೊರೊನಾ ಹಾಗೂ ನಿಪಾ ಸಾಂಕ್ರಾಮಿಕ ರೋಗದ ನಡುವೆ ಯಾತ್ರೆಯನ್ನು ನಿಯಂತ್ರಿಸಲು ಇತರ ಮಾರ್ಗಸೂಚಿಗಳು, ವರ್ಚುವಲ್ ಕ್ಯೂ ಪದ್ಧತಿ, 10 ವರ್ಷಕ್ಕಿಂತ ಕೆಳಗಿನ ಮತ್ತು 65ಕ್ಕಿಂತ ಹೆಚ್ಚಿನ ಪ್ರಾಯದವರಿಗೂ ಪ್ರವೇಶಕ್ಕೆ ಅನುಮತಿಸಲಾಗಿದೆ. ಅವರು ಎರಡೂ ಡೋಸ್ ಲಸಿಕೆ ಪಡೆದಿರಬೇಕು ಮತ್ತು ನೆಗೆಟಿವ್ ಪ್ರಮಾಣ ಪತ್ರವನ್ನು ತೋರಿಸಬೇಕು ಎಂದು ಪ್ರಕಟನೆ ತಿಳಿಸಿದೆ. ಎಲ್ಲರಿಗೂ ಪ್ರಸಾದ ವಿತರಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಮತ್ತು ದರ್ಶನದ ಬಳಿಕ ದೇವಾಲಯದಲ್ಲಿ ಭಕ್ತರಿಗೆ ಉಳಿಯಲು ಅನುಮತಿ ನೀಡುವುದಿಲ್ಲ ಎಂಬ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ದೇವಸ್ಥಾನ ಪ್ರಕಟಣೆ ತಿಳಿಸಿದೆ.