ಬೆಂಗಳೂರು: ಮಕ್ಕಳು ಬೇಕು ಎಂದು ಹಪಹಪಿಸುವ ಅಮಾಯಕ ದಂಪತಿಯನ್ನು ಬಂಡವಾಳವಾಗಿಸಿಕೊಂಡು ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಖದೀಮರನ್ನು ಇದೀಗ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ದೇವಿ ಷಣ್ಮುಗಮ್ಮ, ಮಹೇಶ್, ರಜನಿ, ಜನಾರ್ಧನ್ ಮತ್ತು ಧನಲಕ್ಷ್ಮೀ ಎಂದು ಗುರುತಿಸಲಾಗಿದೆ. ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ನೀಡುತ್ತೇವೆ ಎಂದು ಆರೋಪಿಗಳು ಮಕ್ಕಳಿಲ್ಲದ ಕೆಲ ಜನರನ್ನು ಪತ್ತೆ ಹಚ್ಚುತ್ತಿದ್ದರು. ಬಳಿಕ ಅವರ ಆರ್ಥಿಕ ಪರಿಸ್ಥಿತಿ ಕಂಡು ಇಂತಿಷ್ಟು ಹಣ ಆಗುತ್ತೆ ಎಂದು ಪಿಕ್ಸ್ ಮಾಡುತ್ತಿದ್ದರು. ಪೋಷಕರಿಂದ ಜೈವಿಕ ಅಂಶಗಳನ್ನು ಪಡೆದು ನಂತರ ಏಳೆಂಟು ತಿಂಗಳ ನಂತರ ಅವರಿಗೆ ಒಂದು ಮಗು ಕೊಟ್ಟು ಇದೇ ನಿಮ್ಮ ಮಗು ಎಂದು ಹೇಳುತ್ತಿದ್ದರು.
ಹೀಗೆ ಕಳೆದ ವರ್ಷ ಚಾಮರಾಜಪೇಟೆ ಅಸ್ಪತ್ರೆಯಲ್ಲಿ ನಡೆದ ಮಗು ಕಳ್ಳತನ ಪ್ರಕರಣದ ಲಿಂಕ್ ಮೇಲೆ ತನಿಖೆ ನಡೆಸುತ್ತಿದ್ದ ಪೊಲೀಸರು ಈ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಿ ತನಿಖೆ ಕೈಗೊಂಡಿದ್ದಾರೆ. ಈ ವೇಳೆ ತೀರಾ ಬಡತನಕ್ಕೆ ಸಿಲುಕಿದ ಮನೆಯಲ್ಲಿರುವ ಪುಟ್ಟ ಮಕ್ಕಳನ್ನು ಪತ್ತೆ ಹಚ್ಚುತ್ತಿದ್ದರು. ಮಕ್ಕಳ ಪೋಷಕರಿಗೆ 60 ರಿಂದ 80 ಸಾವಿರ ರೂ. ನೀಡಿ ಮಗು ಕೊಂಡುಕೊಳ್ಳುತ್ತಿದ್ದರು. ಬಳಿಕ ಮಗು ಬೇಕು ಎಂದವರಿಗೆ 6 ಲಕ್ಷ ರೂ.ಗಳವರೆಗೆ ಹಣ ಪಡೆದು ಮಾರಾಟ ಮಾಡುತ್ತಿದ್ದರು.
ಪೊಲೀಸರ ರೋಚಕ ಕಾರ್ಯಾಚರಣೆ
ಹೀಗೆ ಪೊಲೀಸರು ಮಕ್ಕಳ ಮಾರಾಟ ಜಾಲದ ಬಗ್ಗೆ ಕಣ್ಣಿಟ್ಟು ತಾವೇ ಒಂದು ಕಾರ್ಯಾಚರಣೆ ನಡೆಸಿದ್ದರು. ನಮಗೆ ಮಗು ಬೇಕಿದೆ 5 ಲಕ್ಷ ರೂ. ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ವೇಳೆ ದೇವಿ ಷಣ್ಮುಗಮ್ಮ ಎಂಬಾಕೆ ಮುಂಬೈನಿಂದ ಮಗುವೊಂದನ್ನು ರೈಲಿನಲ್ಲಿ ತಂದು ಮಾರಾಟ ಮಾಡಲು ಬಂದಿದ್ದಾಳೆ. ಪೊಲೀಸರು ಮಗು ಕೊಂಡುಕೊಳ್ಳುವ ನೆಪದಲ್ಲಿ ಮಹಿಳೆಯನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ. ದೇವಿ ಷಣ್ಮುಗಮ್ಮ ವಿಚಾರಣೆ ವೇಳೆ ಇದೇ ರೀತಿ ಹನ್ನೊಂದು ಮಕ್ಕಳನ್ನು ಕೊಂಡು, ಮಾರಾಟ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಆರೋಪಿ ಮಹಿಳೆ ಕೊಟ್ಟ ಸುಳಿವಿನ ಮೇರೆಗೆ ಮಕ್ಕಳನ್ನು ಪತ್ತೆ ಹಚ್ಚಿದ ಪೊಲೀಸರು, ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯೂಸಿ)ಗೆ ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಇಬ್ಬರು ಕೆಂಗೇರಿಯ ಅಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಅಸ್ಪತ್ರೆಯಲ್ಲಿ ಸುಮಾರು 20 ಕ್ಕೂ ಹೆಚ್ಚು ತಾಯಿ ಕಾರ್ಡ್ ಗಳನ್ನ ಒಂದೇ ಮನೆಗೆ ಕೊಟ್ಟಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ತಾಯಿ ಕಾರ್ಡ್ ದುರ್ಬಳಕೆ ಕಂಡು ಬಂದಿದ್ದು, ಹೆಸರಿಲ್ಲದ ಪೋಷಕರಿಗೆ ಕಾರ್ಡ್ ನೀಡಿರುವುದು ಗೊತ್ತಾಗಿದೆ. ಪ್ರಕರಣದ ಪ್ರಮುಖ ಆರೋಪಿ ಕಳೆದ ವರ್ಷ ಕೊರೊನಾದಿಂದ ಸಾವನ್ನಪ್ಪಿದ್ದು, ಆಕೆಯೇ ಇದರ ಮಾಸ್ಟರ್ ಮೈಂಡ್ ಆಗಿದ್ದಳು. ಸದ್ಯ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಐವರನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮಕ್ಕಳ ಮಾರಾಟ ಜಾಲದಲ್ಲಿ ಇನ್ನಷ್ಟು ಮಂದಿ ಇರುವ ಶಂಕೆ ಇದ್ದು, ತನಿಖೆ ತೀವ್ರ ಗೊಳಿಸಿದ್ದಾರೆ.