ಬೆಂಗಳೂರು: ಡಿಜಿಟಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಭಾಗವನ್ನೇ ಹೊಂದಿರುವ ಫೇಸ್ಬುಕ್, ವಾಟ್ಸ್ ಆ್ಯಪ್ ಹಾಗೂ ಇನ್ಸ್ಟಾಗ್ರಾಮ್ ಸರ್ವರ್ ಇದ್ದಕ್ಕಿದ್ದಂತೆ ಕೈಕೊಟ್ಟಿರುವುದರಿಂದ ಬರೀ ಸಂವಹನದಲ್ಲಷ್ಟೇ ವ್ಯತ್ಯಯವಾಗಿರುವುದಲ್ಲ. ಜತೆಗೆ ಜಾಗತಿಕ ಆರ್ಥಿಕತೆಯಲ್ಲೂ ಭಾರಿ ನಷ್ಟ ಉಂಟಾಗಿದೆ.
ಸದ್ಯ ಒಂದು ಗಂಟೆಗೂ ಹೆಚ್ಚು ಕಾಲದಿಂದ ಈ ಮೂರೂ ಸಾಮಾಜಿಕ ತಾಣಗಳಿಗೆ ಸಂಬಂಧಿಸಿದಂತೆ ಸರ್ವರ್ ಡೌನ್ ಆಗಿದ್ದು, ಪರ್ಸನಲ್ ಮೆಸೇಜಿಂಗ್ ಹಾಗೂ ಸೋಷಿಯಲ್ ಕಮ್ಯುನಿಕೇಷನ್ ಎರಡೂ ಸಾಧ್ಯವಾಗಿರಲಿಲ್ಲ. ಇದ್ದಕ್ಕಿದ್ದಂತೆ ಕೈಕೊಟ್ಟ ಇವುಗಳ ಹೊಡೆತ ತಾಳಲಾರದೆ ಪರ್ಯಾಯವಾಗಿ ಡಿಜಿಟಲ್ ಬಳಕೆದಾರರು ಟ್ವಿಟರ್, ಟೆಲಿಗ್ರಾಂ ಹಾಗೂ ಸಿಗ್ನಲ್ಗೆ ಮೊರೆ ಹೋಗಿದ್ದರು. ಆದರೆ ಅದು ತಾತ್ಕಾಲಿಕವಾಗಿತ್ತಷ್ಟೇ.
ಈ ನಡುವೆ ನೆಟ್ಬ್ಲಾಕ್ಸ್ನ ದ ಕಾಸ್ಟ್ ಆಫ್ ಶಟ್ಡೌನ್ ಟೂಲ್ (COST) ಫೇಸ್ಬುಕ್, ವಾಟ್ಸ್ಆಯಪ್, ಇನ್ಸ್ಟಾಗ್ರಾಮ್ನಿಂದ ಜಗತ್ತಿನ ಆರ್ಥಿಕತೆಗೆ ಗಂಟೆಯೊಂದರಲ್ಲಿ ಆಗಿರುವ ನಷ್ಟವನ್ನು ಅಂದಾಜಿಸಿದೆ. ಕಾಸ್ಟ್ನ ಒಂದು ಅಂದಾಜಿನ ಪ್ರಕಾರ ಜಾಗತಿಕ ಆರ್ಥಿಕತೆಗೆ ಗಂಟೆಗೆ ಸುಮಾರು 160 ಮಿಲಿಯನ್ ಡಾಲರ್ ನಷ್ಟ ಆಗಿತ್ತು. ಈ ತಾಂತ್ರಿಕ ವೈಫಲ್ಯ ಜಾಗತಿಕವಾಗಿ ಸಂಭವಿಸಿರುವುದರಿಂದ ಫೇಸ್ಬುಕ್ನ ಷೇರು ಕೂಡ ಶೇ. 6 ಕುಸಿದಿದೆ.
ತಮ್ಮ ಸರ್ವರ್ ಡೌನ್ ಆಗಿರುವುದನ್ನು ಟ್ವಿಟರ್ ಮೂಲಕ ಹೇಳಿಕೊಂಡಿರುವ ಫೇಸ್ಬುಕ್, ಅದಕ್ಕಾಗಿ ಬಳಕೆದಾರರ ಕ್ಷಮೆಯನ್ನೂ ಕೋರಿದೆ. ಆದರೆ ಸರ್ವರ್ ಡೌನ್ಗೆ ಕಾರಣ ಏನು ಎಂಬುದನ್ನು ತಿಳಿಸಿಲ್ಲ. ನಿಜವಾಗಿಯೂ ಸರ್ವರ್ ಡೌನ್ ಆಗಿದೆಯೇ ಅಥವಾ ಏನಾದರೂ ಹ್ಯಾಕ್ ಆಗಿದೆಯೇ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.