ಸಮಗ್ರ ನ್ಯೂಸ್: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ದಾಳಿಯ ಬಗ್ಗೆ ಈಗಾಗಲೇ ಎನ್ಐಎ (NIA) ಅಧಿಕಾರಿಗಳು ತನಿಖೆಗೆ ಆರಂಭಿಸಿದ್ದು ಉಗ್ರರಿಂದ ಬಲಿಯಾದ ಪ್ರತಿಯೊಂದು ಕುಟುಂಬಕ್ಕೂ NIA ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ . ನಿನ್ನೆ ಬೆಂಗಳೂರಿನ ಮತ್ತಿಕೆರೆ ನಿವಾಸಿ ಭರತ್ ಭೂಷಣ್ ಮನೆಗೂ ಎನ್ಐಎ ಅಧಿಕಾರಿಗಳ ತಂಡ ಆಗಮಿಸಿದೆ. ಭರತ್ ಭೂಷಣ್ ನಿವಾಸಕ್ಕೆ ಭೇಟಿ ನೀಡಿದ ನಾಲ್ವರು ಅಧಿಕಾರಿಗಳು ಭರತ್ ಭೂಷಣ್ ಪತ್ನಿ ಡಾ.ಸುಜಾತಾರನ್ನು 12 ಗಂಟೆಗಳ ಕಾಲ ವಿಚಾರಣೆ ಮಾಡಿ ದಾಳಿ ಬಗ್ಗೆ ಮಹತ್ವದ ಮಾಹಿತಿ ಸಂಗ್ರಹ ಮಾಡಿದ್ದಾರೆ.
ಭರತ್ ಭೂಷಣ್ ಪತ್ನಿ ಡಾ.ಸುಜಾತಾರ ಬಳಿ ಉಗ್ರ ರೇಖಾಚಿತ್ರ ತೋರಿಸಿ ಪ್ರಶ್ನೆಗಳನ್ನು ಕೇಳಿದ್ದಾರೆ. ಕಾಶ್ಮೀರಕ್ಕೆ ಯಾವಾಗ ಹೋಗಿದ್ರು, ಯಾರ್ಯಾರು ಹೋಗಿದ್ರಿ? ಉಗ್ರರು ಬಂದಾಗ ನೀವು ಎಲ್ಲಿದ್ರಿ, ಭರತ್ ಭೂಷಣ್ ಎಲ್ಲಿದ್ರು? ಉಗ್ರರು ಬಂದಾಗ ಯಾವ ಭಾಷೆ ಮಾತಾಡಿದ್ರು, ಎಷ್ಟು ಜನ ಇದ್ರು? ಉಗ್ರರ ಮುಖ ಚಹರೆ, ವೇಷ ಭೂಷಣ ನೆನಪಿದ್ಯಾ? ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಉಗ್ರರ ಪೈಶಾಚಿಕ ಕೃತ್ಯವನ್ನು ಕಣ್ಣಾರೆ ಕಂಡಿದ್ದ ಸುಜಾತಾ ಕಂಡಿದ್ದೆಲ್ಲವನ್ನು ವಿವರಿಸಿದ್ದಾರೆ. ಮುಂದೆಯೂ ತನಿಖೆಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಶಿವಮೊಗ್ಗದ ಮಂಜುನಾಥ್ ಅವರ ಮನೆಗೂ ತೆರಳಿ ಅವರ ಪತ್ನಿ ಪಲ್ಲವಿ ಅವರಿಂದ ಎನ್ಐಎ ಅಧಿಕಾರಿಗಳು ಮಾಹಿತಿ ಕಲೆ ಹಾಕಲಿದ್ದಾರೆ.