ಸಮಗ್ರ ನ್ಯೂಸ್: ಬಂಗಾಲಕೊಲ್ಲಿಯಲ್ಲಿ “ಫೆಂಗಲ್’ ಚಂಡಮಾರುತ ತೀವ್ರತೆ ಪಡೆದಿದ್ದು, ಗಂಟೆಗೆ 90 ಕಿ.ಮೀ.ವೇಗದಲ್ಲಿ ಶನಿವಾರ ಉತ್ತರ ತಮಿಳುನಾಡು ಹಾಗೂ ಪುದುಚೇರಿ ಕರಾವಳಿಗೆ ಅಪ್ಪಳಿಸಲಿದೆ. ಚಂಡಮಾರುತದಿಂದ ಈಗಾಗಲೇ ಗುಡುಗು ಸಹಿತ ಮಳೆ ಎದುರಿಸುತ್ತಿರುವ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಹಲವು ಸ್ಥಳಗಳಲ್ಲಿ ಶನಿವಾರ ಭಾರೀ ಮಳೆಯಾಗುವ ನಿರೀಕ್ಷೆ ಇದೆ.
ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ತಮಿಳುನಾಡು, ಪುದು ಚೇರಿಯ ಜತೆಗೆ ಆಂಧ್ರದ ನೆಲ್ಲೂರು, ತಿರುಪತಿ, ಚಿತ್ತೂರು ಜಿಲ್ಲೆಗಳಿಗೂ ರೆಡ್ ಅಲರ್ಟ್ ಘೋಷಿಸಿದೆ.
ಕಾಂಚೀಪುರಂನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ತಿರುವರೂರ್‌ಗೆ ಭೇಟಿ ನೀಡಬೇಕಿತ್ತು. ಆದರೆ ಚಂಡಮಾರುತದ ಕಾರಣ ಅವರ ಭೇಟಿಯೂ ರದ್ದುಗೊಂಡಿದೆ.
ಶ್ರೀಲಂಕಾದಲ್ಲೂ ಫೆಂಗಲ್ ಹಾವಳಿಗೆ ಜನರು ತತ್ತರಿಸಿದ್ದು, 3 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. ಮಳೆ ಸಂಬಂಧಿತ ದುರ್ಘಟನೆಗಳಲ್ಲಿ 12 ಮಂದಿ ಮೃತಪಟ್ಟಿದ್ದಾರೆ.
ಫೆಂಗಲ್ ಚಂಡಮಾರುತ ಪರಿಣಾಮ ರಾಜ್ಯದಲ್ಲೂ ಮಳೆ ನಿರೀಕ್ಷೆಯಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.