ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ನ.30ರಂದು ಲಕ್ಷದೀಪೋತ್ಸವ ನೆರವೇರಲಿದೆ. ಈ ನಿಮಿತ್ತ ಶ್ರೀ ದೇವರ ಚಂದ್ರ ಮಂಡಲ ರಥೋತ್ಸವ ನಡೆಯಲಿದ್ದು, ಈ ಸಂದರ್ಭ ದೇಗುಲ ಸಹಿತ ಗೋಪುರದ ಬಳಿಯಿಂದ ಕಾಶಿಕಟ್ಟೆ ತನಕ ಹಾಗೂ ಆದಿ ಸುಬ್ರಹ್ಮಣ್ಯ ದೇಗುಲ ಪರಿಸರದಲ್ಲಿ ಲಕ್ಷ ದೀಪಗಳು ಬೆಳಗಲಿವೆ. ಜತೆಗೆ ವಿಶೇಷವಾಗಿ ಸುಮಾರು 120 ತಂಡಗಳಿಂದ ಅಖಂಡ ಕುಣಿತ ಭಜನೆ ಸೇವೆ ನೆರವೇರಲಿದೆ.
ಸಂಜೆ 6ರಿಂದ ರಾತ್ರಿ 8ರ ತನಕ ರಥೋತ್ಸವದ ಮೊದಲು ಕುಣಿತ ಭಜನೆ ನಡೆಯಲಿದೆ. ರಾಜಗೋಪುರದ ಬಳಿಯಿಂದ ರಥಬೀದಿ ಮತ್ತು ಅಡ್ಡಬೀದಿ ಯಲ್ಲಿ ಕುಣಿತ ಭಜನೆ ನಡೆಯಲಿದೆ. ಮುಖ್ಯ ಗುರು ಮತ್ತು ಗಾಯಕ ಕಾರ್ಕಳದ ಯೋಗೀಶ್ ಕಿಣಿ ಅವರ ಗಾಯನಕ್ಕೆ ಭಜನೆ ತಂಡಗಳು ಹೆಜ್ಜೆ ಹಾಕಲಿವೆ. ಕಾಶಿಕಟ್ಟೆಗೆ ಆಗಮಿಸುವ ದೇವರಿಗೆ ಮಹಾಗಣಪತಿ ಸನ್ನಿಧಾನದಲ್ಲಿ ಗುರ್ಜಿ ಪೂಜೆ ಜರಗಲಿದೆ.
ಬೃಹತ್ ಸ್ವಚ್ಛತಾ ಸೇವೆ
ಭಕ್ತರು ಸ್ವಯಂಪ್ರೇರಿತರಾಗಿ ನೆರವೇರಿಸುವ ಬೀದಿ ಉರುಳುಸೇವೆ ನೆರವೇರಿ ಸಲು ಬೇಕಾದ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ. ನ.30ರಂದು ಸಂಘ ಸಂಸ್ಥೆಗಳ ಸಹಕಾರದಿಂದ ಕುಮಾರ ಧಾರದಿಂದ ರಾಜಗೋಪುರದ ತನಕ ರಸ್ತೆಯನ್ನು ಗುಡಿಸಿ ಬೃಹತ್ ಸ್ವಚ್ಛತಾ ಸೇವೆ ನಡೆಸಲಾಗುವುದು. ಸಂಜೆ ನೀರು ಹಾಯಸಿ ರಸ್ತೆಯನ್ನು ಸ್ವಚ್ಛಗೊಳಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ನೀರುಹಾಯಿಸಿ ರಸ್ತೆಯ ದೂಳನ್ನು ತೆರವುಗೊಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಆಡಳಿತಾಧಿಕಾರಿ ಹೇಳಿದರು.
ಭಕ್ತರು ರಾತ್ರಿ ಬೀದಿ ಉರುಳು ಸೇವೆಯನ್ನು ಭಕ್ತರು ಆರಂಭಿಸುತ್ತಾರೆ. ಸ್ವಯಂ ಸ್ಫೂರ್ತಿಯಿಂದ ಈ ಸಾಂಪ್ರದಾಯಿಕ ಸೇವೆಯನ್ನು ಭಕ್ತರು ಚಂಪಾಷಷ್ಠಿ ಮಹಾರಥೋತ್ಸವದ ವರೆಗೆ ನೆರವೇರಿಸುತ್ತಾರೆ.