ನವದೆಹಲಿ: ಮಂಗಳೂರು ನಗರ ಸೇರಿದಂತೆ ಭಾರತದ ಕರಾವಳಿ ತೀರಗಳಲ್ಲಿರುವ 12 ನಗರಗಳು ಈ ಶತಮಾನದ ಅಂತ್ಯಕ್ಕೆ ಮುಳುಗಲಿವೆ ಎಂಬ ಎಚ್ಚರಿಕೆಯನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾಹಿತಿ ನೀಡುವ ಮೂಲಕ ಎಚ್ಚರಿಕೆ ನೀಡಿದೆ.
ಜಾಗತಿಕ ತಾಪಮಾನದ ದುಷ್ಪರಿಣಾಮಗಳ ಬಗ್ಗೆ ವಿಶ್ವಸಂಸ್ಥೆಯ 195 ಪರಿಸರ ತಜ್ಞರ ಸಮಿತಿ, ಸೋಮವಾರ ಬಿಡುಗಡೆ ಮಾಡಿದೆ. ಬಳಿಕ ಎಚ್ಚರಿಕೆಯ ವರದಿಯನ್ನು (ಐಪಿಸಿಸಿ ವರದಿ) ಅವಲೋಕನ ಮಾಡಿರುವ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಭಾರತಕ್ಕೆ ಮುನ್ನೆಚ್ಚರಿಕೆ ನೀಡಿದೆ.
ಐಪಿಸಿಸಿ ವರದಿ ಹಾಗೂ ತನ್ನ ಉಪಗ್ರಹಗಳು ನೀಡಿರುವ ಮಾಹಿತಿ ಗಳನ್ನು ತಾಳೆ ಹಾಕಿರುವ ನಾಸಾ, 1988ರಿಂದ ಇಚೆಗೆ ಜಾಗತಿಕ ತಾಪಮಾನ ಗಣನೀಯವಾಗಿ ಹೆಚ್ಚಾಗಿದ್ದರಿಂದ ಹಿಮಚ್ಛಾದಿತ ಪ್ರದೇಶಗಳಲ್ಲಿ ಹಿಮಕರಗಿ ಸಮುದ್ರ ಸೇರುತ್ತಿದೆ. ಈ ಹಿಂದೆ ಪ್ರತೀ 100 ವರ್ಷಗಳಿಗೊಮ್ಮೆ ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಈಗ ಹತ್ತಾರು ವರ್ಷಗಳಿಗೊಮ್ಮೆ ಏರಿಕೆಯಾಗುತ್ತಿದೆ.
ತಗ್ಗುಪ್ರದೇಶಗಳಿಗೆ ಸಾಗರ ನೀರು ನುಗ್ಗುವುದು, ಪ್ರತೀ 100 ವರ್ಷಕ್ಕೊಮ್ಮೆ ಆಗುತ್ತಿದ್ದ ಕರಾವಳಿ ಭೂ ಸವಕಳಿ ಇನ್ನು ಪ್ರತೀ ವರ್ಷ ಘಟಿಸುವುದು ಜರಗುತ್ತವೆ. ಕರಾವಳಿಯಲ್ಲಾಗುವ ಈ ಬದಲಾವಣೆ, ಗುಡ್ಡಗಾಡು ಪ್ರದೇಶ, ಬಯಲು ಸೀಮೆಗಳಲ್ಲಿನ ಹವಾಗುಣದ ಮೇಲೂ ದುಷ್ಪರಿಣಾಮ ಬಿರಿ ಅತೀ ಶೀತ ಗಾಳಿ, ಅತ್ಯುಷ್ಣ ಗಾಳಿಯ ಹಾವಳಿ ಜಾಸ್ತಿ ಯಾಗುತ್ತದೆ ಎಂದು ನಾಸಾ ವಿವರಿಸಿದೆ.
ಯಾವೆಲ್ಲ ನಗರಗಳಿಗೆ ಅಪಾಯ?
ಮಂಗಳೂರು, ಮುಂಬೈ, ಮರ್ಮಗೋವಾ, ಕೊಚ್ಚಿ, ಪಾರಾದೀಪ್, ಖಿದೀರ್‌ಪುರ್, ವಿಶಾಖಪಟ್ಟಣಂ, ಚೆನ್ನೈ, ತೂತ್ತುಕುಡಿ, ಕಾಂಡ್ಲಾ, ಒಖಾ, ಭಾವನಗರ ಅಪಾಯದಲ್ಲಿವೆ. ಜಗತ್ತಿನಾದ್ಯಂತ ಸಮುದ್ರ ಮಟ್ಟದಲ್ಲಾಗುತ್ತಿರುವ ಬದಲಾವಣೆ ಆಧರಿಸಿ ವರದಿ ನೀಡಲಾಗುತ್ತಿದೆ. ಈಗಿನ ಟ್ರೆಂಡ್ ಪ್ರಕಾರ ಸಮುದ್ರ ಏರಿದರೆ 2 ಅಡಿಯಷ್ಟು ಏರಲಿದೆ.
ಅಪಾಯ ಯಾಕೆ?
ಏಷ್ಯಾದ ಸುತ್ತಮುತ್ತಲಿನ ಸಮುದ್ರ ಮಟ್ಟ ಜಾಗತಿಕ ಸರಾಸರಿ ದರಕ್ಕಿಂತ ವೇಗವಾಗಿ ಹೆಚ್ಚುತ್ತಿದೆ. ಈ ಹಿಂದೆ ಇಂಥ ತೀವ್ರ ಬದಲಾವಣೆಗಳು ಪ್ರತಿ 100 ವರ್ಷಕ್ಕೊಮ್ಮೆ ಕಾಣಬಹುದಿತ್ತು. ಆದರೆ 2050ರ ಒಳಗಾಗಿ ಪ್ರತಿ 6 ರಿಂದ 9 ವಷಕ್ಕೊಮ್ಮೆ ಸಂಭವಿಸಬಹುದು. 2006-18ರಲ್ಲಿ ನಡೆದ ಅಧ್ಯಯನನದ ಪ್ರಕಾರ ಸಮುದ್ರದ ಮಟ್ಟ ಪ್ರತಿ ವರ್ಷ 3.7 ಮಿ.ಮೀ ನಷ್ಟು ಏರಿಕೆಯಾಗುತ್ತದೆ.