ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯದ ಪೇಟೆಯಲ್ಲಿ ಸುಗಮ ಸಂಚಾರ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೊಸದಾಗಿ ಜಾರಿ ಮಾಡಲಾಗಿರುವ ಪಾರ್ಕಿಂಗ್ ಹಾಗೂ ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ಶನಿವಾರದಿಂದ ದಂಡ ವಾಪತಿಸಬೇಕಾದ ನಿಯಮ ಜಾರಿಗೆ ಬಂದಿದೆ.
ಪ್ರಸಿದ್ಧ ಯಾತ್ರಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ವಾಹನ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಸುಬ್ರಹ್ಮಣ್ಯ ಪೊಲೀಸ್ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ವಿವಿಧ ಇಲಾಖೆಗಳು, ಸಾರ್ವಜನಿಕರ ಸಭೆ ನಡೆಸಿ ಹೊಸ ಪಾರ್ಕಿಂಗ್ ಹಾಗೂ ಸಂಚಾರ ನಿಯಮ ಜಾರಿಗೊಳಿಸಲಾಗಿತ್ತು.
ಹೊಸ ನಿಯಮದ ಬಗ್ಗೆ ಪ್ರಾಯೋಗಿಕ ಹಂತ, ಪ್ರಾಥಮಿಕ ಹಂತದ ಮೂಲಕ ಸಾರ್ವಜನಿಕರಿಗೆ ಪ್ರಚಾರ ಮಾಡಲಾಗಿತ್ತು. ಪೇಟೆಯಲ್ಲಿ ಹೊಸ ನಿಯಮದ ಬಗ್ಗೆ ಈಗಾಗಲೇ ತಿಳಿಸಲಾಗಿರುವುದರಿಂದ ಶನಿವಾರಿಂದ ಪಾರ್ಕಿಂಗ್ ಹಾಗೂ ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ತಯಾರಾಗಿದ್ದರೆ. ಮೊದಲ ದಿನ ದಂಡ ಪಾವತಿಸಿದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಸುಬ್ರಹ್ಮಣ್ಯ ಪೇಟೆಯಲ್ಲಿ ಸುಗಮ ಸಂಚಾರ ಹಿನ್ನಲೆಯಲ್ಲಿ ಕಾಶಿಕಟ್ಟೆಯಿಂದ ರಥಬೀದಿ ಜಂಕ್ಷನ್ ವರೆಗೆ ಒನ್‌ವೇ ಪ್ರವೇಶ ಹಾಗೂ ಸವಾರಿ ಮಂಟಪದಿಂದ ಕಾಶಿಕಟ್ಟೆ ವರೆಗೆ ಒನ್‌ವೇ ನಿರ್ಗಮನ ನಿಯಮ ಮಾಡಲಾಗಿದೆ. ಕಾಶಿಕಟ್ಟೆಯಿಂದ ರಥಬೀದಿ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿ ಪಾರ್ಕಿಂಗ್ ನಿಷೇಧಿಸಲಾಗಿದ್ದು, ಹಾಗೂ ಸವಾರಿ ಮಂಟಪದಿಂದ ಕಾಶಿಕಟ್ಟೆವರೆಗೆ ಒಂದು ಬದಿ ಪಾರ್ಕಿಂಗ್ ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸುವವರಿಗೆ ಹಾಗೂ ಪಾರ್ಕಿಂಗ್ ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆಗೂ ದಂಡ ಬೀಳಲಿದೆ. ವಾಹನಗಳ ಚಕ್ರಕ್ಕೆ ಲಾಕ್ ಕೂಡ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿ ಸಂಚಾರ, ಪಾರ್ಕಿಂಗ್ ನಿರ್ವಹಣೆಗೆ 7 ಗೃಹರಕ್ಷಕರು ಹಾಗೂ ಓರ್ವ ಪೊಲೀಸ್ ಸಿಬಂದಿ ಕರ್ತವ್ಯದಲ್ಲಿರಲಿದ್ದು ಅವರು ಸಂಚಾರ, ಪಾರ್ಕಿಂಗ್ ವ್ಯವಸ್ಥೆ ಮೇಲೆ ನಿಗಾ ಇರಿಸಲಿದ್ದಾರೆ. ಹೊಸ ನಿಯಮ ಉಲ್ಲಂಘಿಸಿರುವುದು ಕಂಡು ಬಂದಲ್ಲಿ ಸಾರ್ವಜನಿಕರೂ ಠಾಣೆಗೆ ಅಥವಾ ಸಿಬಂದಿಗೆ ಮಾಹಿತಿ ನೀಡಬಹುದಾಗಿದೆ. ಠಾಣೆ ಯಿಂದ ಸಿಸಿ ಕೆಮರಾ ಮೂಲಕ ಸಂಚಾರ, ಪಾರ್ಕಿಂಗ್ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸ ಲಾಗುತ್ತದೆ. ನಿಯಮ ಉಲ್ಲಂಘಿಸುವವರಿಗೆ ದಂಡವನ್ನು ಆ ಮೂಲಕವೂ ವಿಧಿಸಲಾಗುತ್ತದೆ.