ಸಮಗ್ರ ನ್ಯೂಸ್: ಭಾರತದ ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಜಯಿಸಿದರು. ಪಾಕಿಸ್ತಾನ ಅರ್ಷದ್ ನದೀಂ ಅವರು ಚಿನ್ನದ ಪದಕ ಗೆದ್ದರು. ಒಲಿಂಪಿಕ್ ಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾದರು.
ಈ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಲಿದ ಒಟ್ಟಾರೆ ಐದನೇ ಪದಕವಾಗಿದೆ. ಅಲ್ಲದೇ ಇದು ಮೊದಲ ಬೆಳ್ಳಿಯಾಗಿದ್ದು, ಉಳಿದ ನಾಲ್ಕು ಕಂಚಿನ ಪದಕಗಳಾಗಿವೆ.
2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್ ಇಲ್ಲಿಯೂ ಅದೇ ಸಾಧನೆ ಮಾಡುವ ಆತ್ಮವಿಶ್ವಾಸದಲ್ಲಿದ್ದರು. ಆದರೆ ಗುರುವಾರ ರಾತ್ರಿ ಅವರಿಗೆ ಲಯ ಕೈಕೊಟ್ಟಿತು. ಆರು ಅವಕಾಶಗಳಲ್ಲಿ ಅವರು ಐದರಲ್ಲಿ ಫೌಲ್ ಮಾಡಿದರು. ಒಂದರಲ್ಲಿ ಮಾತ್ರ 89.45 ಮೀಟರ್ಸ್ ದೂರ ಜಾವೆಲಿನ್ ಥ್ರೋ ಮಾಡಿದರು.
ಆದರೆ, ನೀರಜ್ ಅವರ ‘ಸ್ನೇಹಿತ’ ನದೀಂ ಅವರಿಗೆ ಅದೃಷ್ಠ ಜೊತೆಗೂಡಿತು. 92.97 ಮೀ ದೂರ ಎಸೆದು ಚಿನ್ನದ ಪದಕ ಜಯಿಸಿದರು. ಇದು ಒಲಿಂಪಿಕ್ ಕೂಟ ದಾಖಲೆಯೂ ಆಗಿದೆ. ಪಾಕಿಸ್ತಾನಕ್ಕೆ ಇದು ಮೊದಲ ಒಲಿಂಪಿಕ್ ಚಿನ್ನದ ಪದಕವಾಗಿದೆ.