ಕನ್ನಡ ಬಿಗ್ ಬಾಸ್ ಸೀಸನ್ 8ರ ವಿನ್ನರ್ ಆಗಿ ಮಂಜು ಪಾವಗಡ ಹೊರ ಹೊಮ್ಮಿದ್ದಾರೆ. ಈ ಬಗ್ಗೆ ಸುದೀಪ್ ಅವರು ಅದ್ದೂರಿ ವೇದಿಕೆ ಮೇಲೆ ಘೋಷಣೆ ಮಾಡಿದರು. ಈ ಮೂಲಕ ಬಿಗ್ಬಾಸ್ ಟ್ರೋಫಿ ಹಾಗೂ 53 ಲಕ್ಷ ನಗದು ಬಹುಮಾನ ಮಂಜು ಪಾವಗಡ ಅವರಿಗೆ ಸಿಕ್ಕಿದೆ. ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಳೆ ಹರಿದು ಬಂದಿದೆ.
ಬಿಗ್ ಬಾಸ್ ಕನ್ನಡ ಸೀಸನ್ 8 ಈ ಬಾರಿ ಹಲವು ವಿಷಯಗಳಲ್ಲಿ ದಾಖಲೆ ಬರೆದಿದೆ. ಪ್ರತಿ ಸೀಸನ್ನಲ್ಲಿ ಸ್ಪರ್ಧಿಗಳು ಎಲಿಮಿನೇಟ್ ಆದಾಗಲೂ ಅವರಿಗೆ ಬಂದಿರುವ ಮತಗಳ ಸಂಖ್ಯೆಯನ್ನು ಬಹಿರಂಗಗೊಳಿಸಿಲ್ಲ ಎಂಬ ಕಾರಣಕ್ಕೆ ಈ ಹಿಂದಿನ ಸೀಸನ್ಗಳಲ್ಲಿ ಅಸಮಾಧಾನ ಕೇಳಿಬಂದಿದ್ದವು.
ಹೀಗಾಗಿ, ಇದೇ ಮೊದಲ ಬಾರಿಗೆ ಬಿಗ್ ಬಾಸ್ ವೇದಿಕೆಯಲ್ಲಿ ಟಾಪ್ 5 ಸ್ಪರ್ಧಿಗಳು ಪಡೆದ ಮತಗಳ ಸಂಖ್ಯೆಯನ್ನು ಬಹಿರಂಗಗೊಳಿಸಲಾಗಿತು.
ಈ ಸೀಸನ್ನಲ್ಲಿ ವಿನ್ನರ್ ಆಗಿರುವ ಮಂಜು ಪಾವಗಡ ಬರೋಬ್ಬರಿ 45,03,495 ಮತಗಳನ್ನು ಪಡೆಯುವ ಮೂಲಕ ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಅತಿ ಹೆಚ್ಚು ವೋಟಿಂಗ್ ಪಡೆದಿದ್ದಾರೆ. ಮೊದಲ ರನ್ನರ್ ಅಪ್ ಆಗಿರುವ ಅರವಿಂದ್ ಕೆ.ಪಿ. 43,35,957 ಮತಗಳನ್ನು ಪಡೆದಿದ್ದಾರೆ. ಎರಡನೇ ರನ್ನರ್ ಅಪ್ ಆಗಿರುವ ದಿವ್ಯಾ ಉರುಡುಗ 11,61,205, ಮೂರನೇ ರನ್ನರ್ ಅಪ್ ಆಗಿರುವ ವೈಷ್ಣವಿ ಗೌಡ 10,21,831 ಹಾಗೂ ನಾಲ್ಕನೇ ರನ್ನರ್ ಅಪ್ ಆಗಿರುವ ಪ್ರಶಾಂತ್ ಸಂಬರಗಿ 6,69,020 ಮತಗಳನ್ನು ಪಡೆದಿದ್ದಾರೆ.
ಫೆಬ್ರವರಿ 28ರಂದು ಬಿಗ್ ಬಾಸ್ ಸೀಸನ್ 8 ಆರಂಭವಾಗಿತ್ತು. ಅದ್ದೂರಿ ವೇದಿಕೆ ಏರಿದ 17 ಸ್ಪರ್ಧಿಗಳು ಬಿಗ್ ಬಾಸ್ ಪ್ರವೇಶಿಸಿದ್ದರು. ಈ ಮಧ್ಯೆ ಮೂರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಮನೆಗೆ ಎಂಟ್ರಿ ಪಡೆದುಕೊಂಡಿದ್ದರು. ಆದರೆ, ಕೊರೊನಾ ವಕ್ರದೃಷ್ಟಿ ಬಿಗ್ ಬಾಸ್ ಮೇಲೆ ಬಿದ್ದಿತ್ತು. ಕೊವಿಡ್ ನಿಯಂತ್ರಣಕ್ಕೆ ಹೇರಿದ್ದ ಲಾಕ್ಡೌನ್ನಿಂದಾಗಿ ಬಿಗ್ ಬಾಸ್ ಅರ್ಧಕ್ಕೆ ನಿಂತ ಕಾರ್ಯಕ್ರಮ 43 ದಿನಗಳ ನಂತರದಲ್ಲಿ ಮತ್ತೆ ಶೋ ಆರಂಭಗೊಂಡಿತ್ತು.
ಸೆಕೆಂಡ್ ಇನ್ನಿಂಗ್ಸ್ನಲ್ಲಿ ಅರವಿಂದ್ ಕೆ.ಪಿ, ಮಂಜು ಪಾವಗಡ, ಶಮಂತ್ ಬ್ರೋ ಗೌಡ, ಪ್ರಶಾಂತ್ ಸಂಬರಗಿ, ರಘು ಗೌಡ, ಚಕ್ರವರ್ತಿ ಚಂದ್ರಚೂಡ್, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಶುಭಾ ಪೂಂಜಾ, ವೈಷ್ಣವಿ ಗೌಡ ಹಾಗೂ ಪ್ರಿಯಾಂಕಾ ತಿಮ್ಮೇಶ್ ಇದ್ದರು. ಫಿನಾಲೆ ವೀಕ್ನಲ್ಲಿ ಅರವಿಂದ್ ಕೆ.ಪಿ, ಮಂಜು ಪಾವಗಡ, ದಿವ್ಯಾ ಉರುಡುಗ, ಶುಭಾ ಪೂಂಜಾ, ವೈಷ್ಣವಿ ಗೌಡ ಹಾಗೂ ಪ್ರಶಾಂತ್ ಸಂಬರಗಿ ಉಳಿದುಕೊಂಡಿದ್ದರು. ಈ ಪೈಕಿ ಮಂಜು ಪಾವಗಡ ವಿನ್ ಆಗಿದ್ದಾರೆ.