ಮಂಗಳೂರು: ದ.ಕ ಜಿಲ್ಲೆಯಲ್ಲಿ ಸೋಂಕು ಹೆಚ್ಚಾದಲ್ಲಿ ಮತ್ತೆ ಲಾಕ್‌ಡೌನ್ ಮಾಡಬೇಕಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾತಾನಾಡಿರುವ ಅವರು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಒಂದು ವೇಳೆ ಸೋಂಕು ಹೆಚ್ಚದಲ್ಲಿ ಮತ್ತೆ ಲಾಕ್ಡೌನ್, ವೀಕೆಂಡ್ ಕರ್ಪ್ಯೂ ನಿಯಮಗಳನ್ನು ಕೂಡಾ ಜಾರಿ ಮಾಡಬೇಕಾಗುತ್ತದೆ.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸುವ ಸಲುವಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ನಿಟ್ಟಿನಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಸಂಪೂರ್ಣ ಪ್ರಯತ್ನ ಮಾಡುತ್ತಿದೆ. ಕೊರೊನಾ ಕಾರಣದಿಂದ ಎಲ್ಲಾ ವರ್ಗದವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಆದ್ದರಿಂದ ಮತ್ತೆ ಸಂಪೂರ್ಣ ಲಾಕ್ ಡೌನ್ ಆಗಬಾರದುಎನ್ನುವುದಾದರೆ ಜನರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಕೋವಿಡ್ ನಿಯಂತ್ರಿಸುವ ಸಲುವಾಗಿ ಕೇರಳದಲ್ಲಿ ರೈಲಿಗೆ ಹತ್ತುವ ಮುನ್ನ ಆರ್ ಟಿ ಪಿಸಿಆರ್ ನೆಗೆಟಿವ್ ವರದಿ ಇದ್ದರೆ ಮಾತ್ರವೇ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇವೆ. ಆರೋಗ್ಯ ಕಾರ್ಯಕರ್ತರು ಕೂಡಾ ಜನರ ಆರೋಗ್ಯ ಸುಧಾರಣೆ ಮಾಡಬೇಕು. ಅಂತರಾಜ್ಯ ಸಂಚಾರಕ್ಕೆ ಈಗಾಗಲೇ ಅವಕಾಶ ನೀಡಲಾಗಿದೆ, ಈ ಬಗ್ಗೆ ನಿರ್ಬಂಧ ಹೇರುವ ಬಗ್ಗೆ ಯೋಚಿಸುತ್ತಿದ್ದೇವೆ, ದಿನನಿತ್ಯ ಯಾರು ಸಂಚರಿಸುತ್ತಾರೋ ಅವರಿಗೆ ಪಾಸ್ ವ್ಯವಸ್ಥೆ ಮಾಡಿ ನಿಯಮಿತವಾಗಿ ವಾರಕ್ಕೆ ಒಂದು ಬಾರಿ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ’ ಎಂದಿದ್ದಾರೆ.
ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ ಎಂದು ಜನರು ನಿರ್ಲಕ್ಷ್ಯ ವಹಿಸಿದರೆ ಮತ್ತೆ ಲಾಕ್‌ಡೌನ್‌ನತ್ತ ಸಾಗಬೇಕಾಗುತ್ತದೆ. ಆದರೆ, ಮತ್ತೆ ಲಾಕ್‌ಡೌನ್ ಜಾರಿ ಮಾಡಬಾರದು ಎನ್ನುವ ಉದ್ದೇಶ ನಮ್ಮದು ಜನರ ಸಹಕಾರ ಮುಖ್ಯ, ಜನಪ್ರತಿನಿಧಿ, ಸಂಸದರು ಹಾಗೂ ಎಲ್ಲಾ ಶಾಸಕರ ಜೊತೆ ಚರ್ಚೆ ನಡೆಸಿ ಪರೀಕ್ಷಾ ಪ್ರಮಾಣ ಹೆಚ್ಚು ಮಾಡಲು ಮನವಿ ಮಾಡಲಾಗಿದೆ. ಸದ್ಯ ನಾವು 7 1 ಸಾವಿರ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ಮೊದಲ ಅಲೆಯ ಸಂದರ್ಭ 2-3 ಸಾವಿರದಷ್ಟು ಕೊರೊನಾ ಪರೀಕ್ಷೆಗಳನ್ನು ನಡೆಸುತ್ತಿದ್ದರೆ ಈಗ 10-12 ಸಾವಿರದವರೆಗೆ ಪರೀಕ್ಷೆಗಳನ್ನು ನಡೆಸಲು ಯೋಜಿಸಿದ್ದೇವೆ ಎಂದು ತಿಳಿಸಿದರು.