ಸಮಗ್ರ ನ್ಯೂಸ್: ರಾಷ್ಟ್ರೀಯ ಸಮುದ್ರಶಾಸ್ತ್ರ ಮತ್ತು ಸಂಶೋಧನಾ ಕೇಂದ್ರ ನೀಡಿರುವ, ಕಡಲು ಉಕ್ಕೇರುವ ಸಾಧ್ಯತೆ ಇದೆ ಎಂಬ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲಾ ಕಡಲ ತೀರಗಳ ವ್ಯಾಪ್ತಿಯಲ್ಲಿ ರೆಡ್ ಆಲರ್ಟ್ ಘೋಷಿಸಲಾಗಿದ್ದು, ಎಲ್ಲಾ ಪ್ರವಾಸಿ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಜಿಲ್ಲಾಡಳಿತ ವ್ಯಾಪಕ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಬೇಕಲ, ಪಳ್ಳಿಕ್ಕರ ಬೀಚ್, ಹೊಸದುರ್ಗ ಕೈಟ್ ಬೀಚ್, ಚೆಂಬರಿಕಾ, ಅಯಿತ್ತಲ, ವಲಿಯಪರಂಬ, ಕಣ್ವತೀರ್ಥ ಬೀಚ್‍ಗಳಿಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಜೊತೆಗೆ ಜಿಲ್ಲೆಯಲ್ಲಿರುವ ತೇಲುವ ಸೇತುವೆಯ ಕಾರ್ಯಾಚರಣೆಯನ್ನು ಕೂಡಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸಂಭಾವ್ಯ ಪರಿಸ್ಥಿತಿ ಎದುರಿಸಲು ಆಯಾ ಭಾಗದ ತಹಸೀಲ್ದಾರ್‍ಗಳಿಗೆ ನಿರ್ದೇಶನ ನೀಡಲಾಗಿದ್ದು, ಅಗತ್ಯಬಿದ್ದರೆ ಪರಿಹಾರ ಶಿಬಿರಗಳನ್ನು ಪ್ರಾರಂಭಿಸಲು ಕೂಡಾ ಸಂಸ್ಥೆಗಳು, ಶಾಲೆಗಳನ್ನು ಗುರುತಿಸಿಕೊಳ್ಳಲಾಗಿದೆ. ಜಿಲ್ಲಾ ವೈದ್ಯಾಧಿಕಾರಿಗಳು, ಕರಾವಳಿ ಪೊಲೀಸ್ ಠಾಣೆಗಳು ಮತ್ತು ಅಗ್ನಿಶಾಮಕ ಠಾಣೆಗಳಿಗೂ ಅಲರ್ಟ್ ಇರುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಸೂಚಿಸಿದ್ದಾರೆ.