ಸಮಗ್ರ ನ್ಯೂಸ್ : ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್) ಧಾರವಾಡದ ಓ.ಪಿ.ಡಿ ವಿಭಾಗದಲ್ಲಿ ವಿಶ್ವ ಬೈ ಪೋಲಾರ್ ದಿನಾಚರಣೆಯ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವಿಶ್ವದಾದ್ಯಂತ ಪ್ರತಿ ವರ್ಷ ಮಾರ್ಚ 30 ರಂದು ಬೈಪೋಲಾರ್ ಮಾನಸಿಕ ಕಾಯಿಲೆಯ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಅಂಗವಾಗಿ ಡಿಮ್ಹಾನ್ಸ್ ಸಂಸ್ಥೆಗೆ ಬರುವಂತಹ ರೋಗಿಗಳಿಗೆ ಮತ್ತು ಅವರ ಆರೈಕೆದಾರರುಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ. ಅರುಣಕುಮಾರವರು ಈ ಜಾಗೃತಿ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವುದರ ಮೂಲಕ ಚಾಲನೆ ನೀಡಿ, ಬೈ ಪೋಲಾರ್ ಮಾನಸಿಕ ಕಾಯಿಲೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಬೈ ಪೋಲಾರ್ ಒಂದು ಕ್ಲಿಷ್ಟಕರ ಮಾನಸಿಕ ಕಾಯಿಲೆಯಾಗಿದ್ದು, ಈ ಕಾಯಿಲೆಯು ಕೇವಲ ಅವರ ಮನಸ್ಥಿತಿ ಮೇಲೆ ಪರಿಣಾಮ ಬೀರುವುದಲ್ಲದೇ, ಅವರ ಜೀವನದ ಮೇಲೆ, ಕುಟುಂಬದ ಸದಸ್ಯರ ಮೇಲೆ ಹಾಗೂ ಸಮುದಾಯ ಮೇಲೆ ಪ್ರಭಾವ ಬೀರುತ್ತದೆ. ಈ ಕಾಯಿಲೆಯಲ್ಲಿ ಉನ್ಮಾದ ಹಾಗೂ ಖಿನ್ನತೆಯ ಲಕ್ಷಣಗಳು ಕೂಡಿಕೊಂಡಿರುತ್ತವೆ. ಉನ್ಮಾದ ಕಾಯಿಲೆ ಲಕ್ಷಣಗಳೆಂದರೆ ಅತಿಯಾದ ಸಿಟ್ಟು, ಮಾತನಾಡುವುದು, ಚಟುವಟಿಕೆಗಳು ಹಾಗೂ ಆತ್ಮಪ್ರತಿಷ್ಠೆ ಇತರ ಲಕ್ಷಣಗಳು ಇರುತ್ತವೆ. ಖಿನ್ನತೆಯಲ್ಲಿ ಅತಿಯಾದ ಬೇಸರ, ದು:ಖ, ಕೆಲಸಗಳಲ್ಲಿ ನಿರಾಸಕ್ತಿ, ಸಾಮಾಜಿಕವಾಗಿ ಬೇರೆಯವರೊಂದಿಗೆ ಬೆರೆಯಲು ಆಸಕ್ತಿ ಇರದೇ ಇರುವುದು ಮತ್ತು ಆತ್ಮಹತ್ಯೆ ಯೋಚನೆಗಳು ಇತ್ಯಾದಿ ಲಕ್ಷಣಗಳು ಇರುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಿಮ್ಹಾನ್ಸ್ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರು ಹಾಗೂ ಸೈಕಿಯಾಟ್ರಿ ವಿಭಾಗದ ಮುಖ್ಯಸ್ಥರು ಡಾ.ರಾಘವೆಂದ್ರ ನಾಯಕ್ ರವರು ಮಾತನಾಡಿ ಬೈ ಪೋಲಾರ್ ಮಾನಸಿಕ ಕಾಯಿಲೆಯ ಗುಣಲಕ್ಷಣಗಳು ಹಾಗೂ ಲಭ್ಯವಿರುವ ವೈಜ್ಞಾನಿಕ ಚಿಕಿತ್ಸಾ ಪದ್ಧತಿಗಳ ಕುರಿತು ವಿವರಿಸಿದರು. ಈ ಕಾಯಿಲೆಯು ಬರಲು ಇರುವ ಮುಖ್ಯ ಕಾರಣಗಳ ಬಗ್ಗೆ ತಿಳಿಸಿದರು. ಜನಸಾಮಾನ್ಯರಲ್ಲಿ ಮಾನಸಿಕ ಕಾಯಿಲೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆಯೆಂದು ಅಭಿಪ್ರಾಯಪಟ್ಟರು.
ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಸತೀಶ್ ಕೌಜಲಗಿ ರವರು ಮಾನಸಿಕ ಕಾಯಿಲೆಗಳ ಲಕ್ಷಣಗಳು, ಆರೈಕೆದಾರರಿಗೆ ಇರಬೇಕಾದ ಜವಾಬ್ದಾರಿಗಳು, ಚಿಕಿತ್ಸಾ ಸೌಲಭ್ಯಗಳ ಬಗ್ಗೆ ವಿವರಿಸಿದರು. ಬೈ ಪೋಲಾರ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ತಾವು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿರುವುದರ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಸೈಕಿಯಾಟ್ರಿ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಶ್ರೀನಿವಾಸ ಕೊಸಗಿ, ಡಾ. ಮಂಜುನಾಥ ಭಜಂತ್ರಿ ರವರು ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಎಂ.ಫಿಲ್ ವಿದ್ಯಾರ್ಥಿನಿ ಅಕ್ಷತಾ ತೋಟಗೇರ್ ರವರು ನಿರೂಪಿಸಿದರು. ಕಾವೇರಿ ಕಿತ್ತೂರು ರವರು ಪ್ರಾರ್ಥಸಿದರು. ವಿನೋದಾ ಹಿರೆಮಠ ರವರು ಸ್ವಾಗತಿಸಿದರು. ರಾಕೇಶ್ ರವರು ವಂದಿಸಿದರು.
ಕಾರ್ಯಕ್ರಮದಲ್ಲಿ ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಸಿಬ್ಬಂದಿಗಳಾದ ಅಶೋಕ ಕೋರಿ, ಓಬಾ ನಾಯ್ಕ, ಪ್ರಶಾಂತ ಪಾಟೀಲ್, ಆರ್.ಎಮ್.ತಿಮ್ಮಾಪೂರ್, ಶ್ರೀದೇವಿ ಬಿರಾದಾರ, ಅನಂತರಾಮು ಬಿ.ಜಿ ಹಾಗೂ ಸೈಕಿಯಾಟ್ರಿಕ್ ನಸಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಆರ್.ಶ್ರೀವಾಣಿ ಹಾಗೂ ಉಪನ್ಯಾಸಕರಾದ ಡಾ. ಸುಶೀಲ್‍ಕುಮಾರ್ ರೋಣದ, ಫಿಜಿಯೋಥೇರಪಿಸ್ಟ್ ಡಾ. ಇಸ್ಮೈಲ್ ರವರು, ಎಂ.ಫಿಲ್ ಇನ್ ಸೈಕಿಯಾಟ್ರಿಕ್ ಸೋಷಿಯಲ್ ವರ್ಕ ವಿಭಾಗದ ವಿದ್ಯಾರ್ಥಿಗಳಾದ ಲಕ್ಷ್ಮೀ ಮಲ್ಲಿಕ್, ಮೋನಿಶಾ, ರಂಜನಿ, ಸಚಿನ್ ಪ್ರಸಾದ್, ಯತೀಶ್ ಭಾರದ್ವಾಜ್ ಸೇರಿದಂತೆ ಕ್ಲಿನಿಕಲ್ ಸೈಕಾಲಜಿ ಸಿಬ್ಬಂದಿಗಳು, ವಿದ್ಯಾರ್ಥಿಗಳು, ನರ್ಸಿಂಗ್ ವಿಭಾಗದ ಪ್ರಶಿಕ್ಷಣಾರ್ಥಿಗಳು ಮತ್ತು ರೋಗಿಗಳು ಹಾಗೂ ಅವರ ಆರೈಕೆದಾರರು ಭಾಗವಹಿಸಿದ್ದರು.