ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಮೆಟ್ರೋ ಅಂದ್ರೆ ಎಲ್ಲರಿಗೂ ಖುಷಿ, ಒಂದು ಸಲನಾದ್ರು ಮೆಟ್ರೋದಲ್ಲಿ ಪ್ರಯಾಣಿಸಬೇಕು ಎಂಬುದು ಜನರ ಆಸೆಯಾಗಿರುತ್ತದೆ. ಆದ್ರೆ ಇದೇ ಮೆಟ್ರೊದಲ್ಲಿ ಅಮಾನವೀಯ ಘಟನೆಯೊಂದು ನಡೆದು ಹೋಗಿದೆ.
ಹೌದು ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ರೈತನೊರ್ವನಿಗೆ ಅವಮಾನ ಮಾಡಲಾಗಿದೆ.
ಫೆಬ್ರವರಿ 26 ರಂದು ಬಟ್ಟೆ ಕೊಳೆಯಿದೆ ಎಂಬ ಕಾರಣಕ್ಕೆ ಬಡ ರೈತನ ಮೇಲೆ ಮೇಟ್ರೋ ಸಿಬ್ಬಂದಿ ದುರಹಂಕಾರದ ವರ್ತನೆ ಮೆರೆದಿದ್ದರು. ಇದನ್ನು ಸಹ ಪ್ರಯಾಣಿಕ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಅಷ್ಟೇ ಅಲ್ಲ, ರೈತನನ್ನು ಒಳಗೆ ಬಿಡದ ಸಿಬ್ಬಂದಿ ವಿರುದ್ಧ ಸಹ ಪ್ರಯಾಣಿಕರು ಕಿಡಿಕಾರಿದ್ದರು. ಜೊತೆಗೆ ಸಹ ಪ್ರಯಾಣಿಕರೆಲ್ಲರೂ ಸೇರಿ ಸಿಬ್ಬಂದಿಗೆ ಲೆಕ್ಕಿಸದೇ ರೈತರನ್ನು ಕರೆದುಕೊಂಡು ಹೋಗಿದ್ದರು. ನಂತರ ಸಿಬ್ಬಂದಿ ಅತಿರೇಕದ ವರ್ತನೆಯ ವಿಡಿಯೋವನ್ನು ಬಿಎಂಆರ್ಸಿಎಲ್ಗೆ ಟ್ಯಾಗ್ ಮಾಡಿ ವಿಐಪಿಗಳಿಗೆ ಮಾತ್ರನಾ ಮೆಟ್ರೋ ಎಂದು ಪ್ರಶ್ನಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಕಿಡಿಕಾರಿದ್ದರು. ‘
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗವು ಬಿಎಮ್ಆರ್ಸಿಎಲ್(BMRCL)ಗೆ ನೋಟಿಸ್ ಜಾರಿ ಮಾಡಿದೆ. ವ್ಯಕ್ತಿಯ ಬಟ್ಟೆಯ ಆಧಾರದ ಮೇಲೆ ಸಾರ್ವಜನಿಕ ಸಾರಿಗೆಯಲ್ಲಿ ಅವಕಾಶ ನಿರಾಕರಣೆ ಮಾಡುವಂತಿಲ್ಲ. ಆ ರೀತಿಯಾದರೆ, ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದಿತು.
ಇದರಿಂದ ಎಚ್ಚೆತ್ತ ಬಿಎಂಆರ್ಸಿಎಲ್ ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ ಭದ್ರತಾ ಮೇಲ್ವಿಚಾರಕರ ಸೇವೆಯನ್ನು ವಜಾಗೊಳಿಸಲಾಗಿತ್ತು. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಿಗಮವು ವಿಷಾದಿಸುತ್ತದೆ ಎಂದು ಬಿಎಂಆರ್ಸಿಎಲ್ ತಿಳಿಸಿತ್ತು.