ಸಮಗ್ರ ನ್ಯೂಸ್: ಬಿಜೆಪಿಗೆ ಸಡ್ಡು ಹೊಡೆದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ಆರಂಭಗೊಂಡ ಪುತ್ತಿಲ ಪರಿವಾರವನ್ನು ಬಿಜೆಪಿ ಜೊತೆ ವಿಲೀನ ಮಾಡುವ ಪ್ರಯತ್ನಗಳು ಭರದಿಂದ ಸಾಗಿದ್ದು ಈ ಮಧ್ಯೆ ಅರುಣ್ ಪುತ್ತಿಲರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲು ಪರಿವಾರ ಬೇಡಿಕೆ ಇಟ್ಟಿದೆ.
ಬಿಜೆಪಿ ಪುತ್ತಿಲ ಪರಿವಾರ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರು ಈ ನಿಟ್ಟಿನಲ್ಲಿ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಲೋಕಾಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಅರುಣ್ ಪುತ್ತಿಲರನ್ನು ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳಲು ಉತ್ಸಾಹ ಹೊಂದಿದ್ದರೆ , ತವರು ಕ್ಷೇತ್ರ ಪುತ್ತೂರಿನಲ್ಲಿ ಈ ಬಗ್ಗೆ ಇನ್ನೂ ಭಿನ್ನಾಭಿಪ್ರಾಯಗಳಿವೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಬಿಜೆಪಿ ನಾಯಕರು ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಗೆ ಅದರದ್ದೇ ಆದ ಸಂವಿಧಾನ ಇದೆ. ಸಂವಿಧಾನವನ್ನು ಒಪ್ಪಿಕೊಂಡು ಪಕ್ಷಕ್ಕೆ ಬರಬೇಕೆನ್ನುವುದು ಬಿಜೆಪಿ ಮುಖಂಡರ ನಿಲುವು ಕೂಡ ಆಗಿದೆ. ಅರುಣ್ ಪುತ್ತಿಲ ಸೇರಿದಂತೆ ಎಲ್ಲರಿಗೂ ಬಿಜೆಪಿಗೆ ಸೇರುವುದಾದ್ರೆ ಸ್ವಾಗತ, ಆದರೆ ಯಾವುದೇ ಬೇಡಿಕೆ ಇಟ್ಟುಕೊಂಡು ಪಕ್ಷಕ್ಕೆ ಬರುವಂತಿಲ್ಲ, ಸಾಮಾನ್ಯ ಕಾರ್ಯಕರ್ತನಾಗಿ ದುಡಿದು ಪಕ್ಷ ನೀಡಿದ ಜವಾಬ್ದಾರಿ ಒಪ್ಪಿಕೊಂಡು ಇರುವುದಾದರೆ ಪಕ್ಷಕ್ಕೆ ಸ್ವಾಗತ ಎಂದಿದ್ಧಾರೆ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು.
ಪುತ್ತಿಲ ಪರಿವಾರ ಮತ್ತು ಅದರ ಮುಖಂಡರು ನಿರಂತರವಾಗಿ ಬಿಜೆಪಿ ವಿರುದ್ಧ ಚಟುವಟಿಕೆ ಮಾಡಿದ್ದಾರೆ ಜೊತೆಗೆ ಬಿಜೆಪಿ ಹಾಗು ಹಿಂದೂ ಮುಖಂಡರನ್ನು ಹೀಯಾಳಿಸಿದ್ದಾರೆ. ಈ ಎಲ್ಲಾ ತಪ್ಪುಗಳನ್ನು ತಿದ್ದಿ ಪಕ್ಷಕ್ಕೆ ಬರುವುದಕ್ಕೆ ಅಭ್ಯಂತರವಿಲ್ಲ ಜೊತೆಗೆ ಬಿಜೆಪಿಗೆ ವಿರುದ್ಧವಾಗಿ ಆರಂಭಿಸಿರುವ ಪುತ್ತಿಲ ಪರಿವಾರ ವಿಸರ್ಜಿಸಿ ಬರಬೇಕು ಎಂದಿದ್ದಾರೆ.
ಆದರೆ ಸೂಕ್ತ ಸ್ಥಾನಮಾನ ದೊರೆತರಷ್ಟೇ ಬಿಜೆಪಿ ಜೊತೆ ಬರುವ ಸೂಚನೆ ನೀಡಿದ್ದಾರೆ ಅರುಣ್ ಕುಮಾರ್ ಪುತ್ತಿಲ. ಅದರಲ್ಲೂ ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ಸ್ಥಾನ ನೀಡುವಂತೆ ಪುತ್ತಿಲ ಪರಿವಾರ ಶರತ್ತು ವಿಧಿಸಿದೆ.
ಇದೇ ವಿಚಾರದಲ್ಲಿ ಇನ್ನೂ ಅಂತಿಮ ಹಂತಕ್ಕೆ ಬರಲಾಗದೆ ಮಾತುಕತೆ ಮುಂದುವರೆದಿದ್ದು ಲೋಕಸಭಾ ಚುನಾವಣೆಯ ಮೊದಲು ಸೂಕ್ತ ನಿರ್ಧಾರವನ್ನು ಪುತ್ತಿಲ ಪರಿವಾರ ಪ್ರಕಟಿಸಿಲಿದೆ ಎನ್ನಲಾಗಿದೆ.