ಸಮಗ್ರ ನ್ಯೂಸ್:ಇಷ್ಟು ವರ್ಷಗಳ ಕಾಲ ವನವಾಸದಲ್ಲಿದ್ದ ರಾಮನಿಗೆ ಮರಳಿ ತನ್ನ ಸ್ವಂತ ಸ್ಥಳದಲ್ಲಿ ಪಟ್ಟಾಭಿಷೇಕವಾಗುತ್ತಿರುವುದನ್ನು ಕಣ್ತುಂಬಿಕೊಳ್ಳಲು ಕೆಲವೇ ದಿನಗಳು ಬಾಕಿ ಉಳಿದಿವೆ. ಕೋಟ್ಯಾಂತರ ಜನರ ರಾಮರಾಜ್ಯದ ಕನಸು ನನಸಾಗುವ ಅಮೃತಘಳಿಗೆ ಎದುರಾಗುತ್ತಿದೆ. ಆ ಒಂದು ಸುಸಂದರ್ಭಕ್ಕೆ ಸಾಕ್ಷಿಯಾಗಲು ಇಡೀ ಹಿಂದೂಸ್ತಾನವೇ ಕ್ಷಣಗಣನೆಗೆ ಸಿದ್ಧವಾಗಿದೆ. ಎಷ್ಟೋ ಹೋರಾಟಗಳು, ಎಷ್ಟೋ ಸಾವುಗಳು, ಅದೆಷ್ಟೋ ಚಳುವಳಿಗಳು, ತ್ಯಾಗ-ಬಲಿದಾನಗಳ ಫಲವಾಗಿ ಇಂದು ಭಾರತೀಯರು ರಾಮನ ರಾಜ್ಯವನ್ನು ಮರಳಿ ಕಟ್ಟುವಂತಾಗಿದೆ. ಶತಮಾನಗಳ ಹೋರಾಟದ ಫಲವಾಗಿ ಇಂದು ರಾಮನ ಜನ್ಮಭೂಮಿ ಹಿಂದೂಗಳದ್ದೇ ಆಗಿದೆ. ವಿಶ್ವಮಟ್ಟದಲ್ಲಿ ಭಾರತ ಹಿಂದೂರಾಷ್ಟçವಾಗಿ ಪರಿಣಮಿಸುತ್ತಿರುವುದು ಪ್ರತಿಯೊಬ್ಬ ಹಿಂದೂವಿಗೂ ಹೆಮ್ಮೆಯ ಸಂಗತಿ. ನಮ್ಮ ಧರ್ಮದ ಸಂಸ್ಕೃತಿ, ಆಚಾರ-ವಿಚಾರಗಳು ವಿದೇಶಿಯರ ಮನಗೆದ್ದು ಅವರೂ ಕೂಡ ಅವುಗಳ ಆಚರಣೆಯಲ್ಲಿ ತೊಡಗಿರುವುದು ಅದರ ಸತ್ವ ಸಾರವನ್ನು ಒತ್ತಿ ಹೇಳುತ್ತದೆ.
ರಾಮನ ಆದರ್ಶ, ಮಾತಿಗೆ ತಪ್ಪದ ನಡೆ, ತ್ಯಾಗ, ಸೀತೆಯ ಸದ್ಗುಣಗಳು, ಬೆಂಕಿಯಲ್ಲೂ ಬೇಯದ ಅವಳ ಪಾವಿತ್ರ್ಯತೆ, ಲಕ್ಷ್ಮಣನ ಭ್ರಾತೃತ್ವ ಭಾವ, ಊರ್ಮಿಳೆಯ ಸಹಿಷ್ಣುತೆ, ರಾಮ ಹಾಗೂ ವಾಲಿ-ಸುಗ್ರೀವರ ಸ್ನೇಹ, ಹನುಮನ ಶಕ್ತಿ, ಹನುಮನ ಭಕ್ತಿ, ಶಬರಿಯ ಮುಗ್ಧ ಪ್ರೀತಿ ಹೀಗೆ ಹಲವಾರು ಸದ್ ವಿಚಾರಗಳಿಗೆ ಸಾಕ್ಷಿಯಾದ ಈ ಭರತಭೂಮಿ ರಾಮಭೂಮಿಯಾಗಿರುವುದು, ರಾಮಮಂದಿರ ನಿರ್ಮಾಣವಾಗಿರುವುದು ಪ್ರತಿಯೊಬ್ಬ ಹಿಂದೂವಿನ ಎದೆಯಲ್ಲಿ ಹೂ ಅರಳಿದಂತಾಗಿದೆ. ಆದರೆ ರಾಮಮಂದಿರ ನಿರ್ಮಾಣದ ಅಗತ್ಯವಿತ್ತೇ? ಕೋಟಿ ಕೋಟಿ ಸುರಿದು ರಾಮನನ್ನು ಅಯೋಧ್ಯೆಯಲ್ಲಿ ಪುನರ್‌ಸ್ಥಾಪಿಸುವ ಅವಶ್ಯಕತೆ ಇತ್ತೇ? ಅದೇ ಹಣವನ್ನು ಹಸಿದವರಿಗೆ, ಸೂರಿಲ್ಲದವರಿಗೆ, ಮೂಲಭೂತ ವ್ಯವಸ್ಥೆಗಳಿಲ್ಲದವರಿಗೆ ಖರ್ಚು ಮಾಡಬಹುದಿತ್ತಲ್ಲವೇ? ಹೇ ರಾಮ್..! ಮಂದಿರ ಕಟ್ಟಿಸಿಕೊಂಡು ಬೆಚ್ಚಗೆ ಗರ್ಭಗುಡಿಯಲ್ಲಿ ಕುಳಿತುಕೊಳ್ಳುವ ನಿನಗೇನು ಗೊತ್ತು ನನ್ನ ದೇಶದಲ್ಲಿ ಸೂರಿಲ್ಲದೆ ಚಳಿ ಮಳೆಯಲ್ಲಿ, ಬೆಂಕಿ ಬಿಸಿಲಲ್ಲಿ ನಡುಗಿ ಸುಡುತ್ತಿರುವ ಬಡ ದೇಹಗಳ ಪಾಡು ಎಂದು ಬೊಂಬಡ ಬಡಿದುಕೊಳ್ಳುತ್ತಿರುವ ಪ್ರಬುದ್ಧರಿಗೆ ನನ್ನದೊಂದು ಕಿವಿಮಾತು. ಬಡಜನರ ಈ ಪರಿಸ್ಥಿತಿಗಳಿಗೆ ಕಾರಣ ರಾಮನಲ್ಲ. ಸರ್ಕಾರದ ಬೊಕ್ಕಸವನ್ನು ವಿದೇಶಗಳಲ್ಲಿ ಆಸ್ತಿ ಮಾಡಲು ಸದ್ದಿಲ್ಲದಂತೆ ಕರಗಿಸುತ್ತಿರುವ ರಾವಣರು(ರಾಜಕಾರಣಿಗಳು). ಮತ್ತೊಂದು ಬಹಳ ಮುಖ್ಯವಾದ ಸಂಗತಿ ಏನೆಂದರೆ ರಾಮಮಂದಿರದ ನಿರ್ಮಾಣಕ್ಕೆ ಹಾಗೂ ಅದಕ್ಕೆ ಸಂಬಧಪಟ್ಟಂತಹ ಇತರೆ ಕೆಲಸ ಕಾರ್ಯಗಳಿಗೆ ಸುಮಾರು 1800 ಕೋಟಿ ಎಂದು ಅಂದಾಜಿಸಲಾಗಿರುವ ಮೊತ್ತ ಸರ್ಕಾರದ ತೆರಿಗೆ ಹಣವಲ್ಲ. ಅದು ಸ್ವಯಂಪ್ರೇರಿತರಾಗಿ ಭಾರತೀಯ ನಾಗರೀಕರು, ಹಲವಾರು ಸಂಘ-ಸAಸ್ಥೆಗಳು, ವಿದೇಶಿಯರು ಹಾಗೂ ವಿದೇಶಿ ಭಾರತೀಯರು ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ಈ ಖಾತೆಗೆ ಬಹಳ ಅಭಿಮಾನದಿಂದ ಹಾಗೂ ಭಕ್ತಿಯಿಂದ ಜಮಾ ಮಾಡಿರುವ ಹಣ. ಆದ್ದರಿಂದ ರಾಮಮಂದಿರ ನಿರ್ಮಾಣದ ಖರ್ಚುವೆಚ್ಚಗಳ ಲೆಕ್ಕಗಳನ್ನು ಕುರಿತು ಸರ್ಕಾರವನ್ನಾಗಲಿ ಅಥವಾ ಮಾನ್ಯ ಪ್ರಧಾನಮಂತ್ರಿಯವರನ್ನಾಗಲಿ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ.
ಸಾಮಾಜಿಕ ವ್ಯವಸ್ಥೆಗಳು, ಆಡಳಿತ ಪದ್ಧತಿಗಳು ಹಾದಿ ತಪ್ಪಿ ಹದಗೆಟ್ಟಿವೆ. ಅಂತಹವುಗಳನ್ನು ಪ್ರಶ್ನೆ ಮಾಡದ ಹೊರತು ಬಡವನಿಗೆ ಸೂರು ಇಲ್ಲ. ಅವನ ಹೊಟ್ಟೆಗೆ ಗಂಜಿಯೂ ಇಲ್ಲ. ರಾಮನ ಜನ್ಮಸ್ಥಳ ಒಂದು ಪವಿತ್ರವಾದ ಧಾರ್ಮಿಕ ಕ್ಷೇತ್ರವಾಗಲು ಅಣಿಯಾಗಿದೆ. ಈ ಮೂಲಕ ಸಾವಿರಾರು ಬಡಬಗ್ಗರ, ನಿರುದ್ಯೋಗಿಗಳ ಜೀವನಕ್ಕೆ ದಾರಿದೀಪವಾಗುತ್ತಿದೆ. ಸಾರಿಗೆ,
ಪ್ರವಾಸೋದ್ಯಮ, ಸಣ್ಣ ವ್ಯಾಪಾರಗಳು ಅಭಿವೃದ್ಧಿಯಾಗುತ್ತವೆ. ಶ್ರೀರಾಮನ ಹೆಸರಿನಲ್ಲಿ ಅದೆಷ್ಟೋ ಬಡಕುಟುಂಬಗಳು ಉದ್ಧಾರವಾಗಲಿವೆ. ಸಾಧ್ಯವಾದಷ್ಟು ಹಸಿದ ಹೊಟ್ಟೆಗಳಿಗೆ ಅನ್ನವಿಕ್ಕುವ ಪ್ರಯತ್ನವನ್ನು ಇನ್ನು ಮುಂದೆ ರಾಮ ಮಾಡುತ್ತಾನೆ.
ಒಂದು ಮಹತ್ಕಾರ್ಯ ನಡೆಯುವಾಗ ನಾವು ಅದನ್ನು ಒಪ್ಪಿಕೊಂಡು ಅದರಿಂದಾಗುವ ಒಳಿತುಗಳ ಬಗ್ಗೆ ಯೋಚನೆ ಮಾಡೋಣ. ರಾಮನನ್ನು ಪೂಜಿಸುವ, ಪ್ರಾರ್ಥಿಸುವ ಮನಸ್ಸಿಲ್ಲದಿದ್ದರೂ ಚಿಂತೆಯಿಲ್ಲ ಆದರೆ ರಾಮಮಂದಿರ ನಿರ್ಮಾಣದಿಂದಾಗುವ ಬಹಳಷ್ಟು ಒಳಿತುಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲವನ್ನೂ ಧಾರ್ಮಿಕ ನೆಲೆಗಟ್ಟಿನಲ್ಲಿ ನೋಡಿ ತಪ್ಪುಗಳನ್ನೆಲ್ಲಾ ರಾಮನ ಮೇಲೆ ಹೊರಿಸುವುದು ಎಷ್ಟರ ಮಟ್ಟಿಗೆ ಸರಿ..?
ಅಷ್ಟೇ ಅಲ್ಲ ರಾಮನ ಆದರ್ಶಗಳನ್ನು ಅರ್ಥ ಮಾಡಿಕೊಳ್ಳದೇ ಅವನ ಮೇಲೆ ಆಪಾದನೆ ಮಾಡುವವರಿಗೂ ಹಾಗೂ ರಾಮನ ಆದರ್ಶಗಳನ್ನು ಪಾಲಿಸದೇ ಬರೀ ಧರ್ಮದ ಪರವಾಗಿ ‘ಜೈ ಶ್ರೀರಾಮ್’ ಎಂದು ಅಂಧ ಘೋಷಣೆ ಕೂಗುವವರಿಗೂ ಏನೂ ವ್ಯತ್ಯಾಸವಿಲ್ಲ. ರಾಮ ಕೇವಲ ಧರ್ಮದ ಪ್ರತೀಕವಲ್ಲ. ಧರ್ಮದಾಚೆಗೂ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾದ ಗುಣಗಳು, ತ್ಯಾಗ, ಸನ್ನಡತೆ, ಸದ್ಗುಣಗಳಂತಹ ಮೌಲ್ಯಗಳ ಪ್ರತೀತಿ ಈ ಮರ್ಯಾದ ಪುರುಷ.
ಶ್ರೀಮತಿ ರೂಪಾ ಹೊಸದುರ್ಗ
ಸಾಹಿತಿಗಳು ಹಾಗೂ ಉಪನ್ಯಾಸಕರು,
ಬೆಂಗಳೂರು