ಸಮಗ್ರ ನ್ಯೂಸ್: ಯುಪಿಐ ಡಿಜಿಟಲ್ ಪಾವತಿ ಭಾರತದಲ್ಲಿ ಗಣನೀಯ ಏರಿಕೆಯಾಗಿದ್ದು, ಕೇವಲ 5 ವರ್ಷದಲ್ಲಿ ವಹಿವಾಟು 92 ಕೋಟಿಯಿಂದ 8,375 ಕೋಟಿಗೆ ಏರಿಕೆಯಾಗಿದೆ. ಯುಪಿಐ ಪಾವತಿಗಳ ಗಣನೀಯ ವಿಸ್ತರಣೆಯಿಂದಾಗಿ ಕಳೆದ ಆರ್ಥಿಕ ವರ್ಷದಲ್ಲಿ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಬೆಳವಣಿಗೆಯನ್ನು 7.8%ಕ್ಕೆ ಇಳಿಸಲು ಸಹಾಯ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಈ ಕುರಿತು ಲೋಕಸಭೆಗೆ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕೆ ಕರದ್ ಲಿಖಿತ ಉತ್ತರ ನೀಡಿದ್ದು, ಯುಪಿಐ ವಹಿವಾಟುಗಳು ಗಣನೀಯ ಬೆಳವಣಿಗೆಯನ್ನು ಕಂಡಿದೆ. ಆರ್ಥಿಕ ವರ್ಷ 2017-18ರಲ್ಲಿ 92 ಕೋಟಿ ಇದ್ದರೆ 2022-23 ಆರ್ಥಿಕ ವರ್ಷದಲ್ಲಿ ವಹಿವಾಟು 8,375 ಕೋಟಿಗೆ ಏರಿಕೆಯಾಗಿದೆ. ಇದರಿಂದ ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರ 147% ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಯುಪಿಐ ವಹಿವಾಟಿನ ಮೌಲ್ಯ ಆರ್ಥಿಕ ವರ್ಷ 2017-18ರಲ್ಲಿ 1 ಲಕ್ಷ ಕೋಟಿ ರೂ. ಯಿಂದ ಆರ್ಥಿಕ ವರ್ಷ 2022-23ರಲ್ಲಿ 137 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಸಿಎಜಿಆರ್ 168% ಏರಿಕೆಯನ್ನು ತೋರಿಸುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಸೆಂಬರ್ 11 ರವರೆಗೆ ಯುಪಿಐ 8,572 ಕೋಟಿ ವಹಿವಾಟುಗಳನ್ನು ಸಾಧಿಸಿದೆ. ಆರ್ಥಿಕ ವರ್ಷ 2022-23 ರಲ್ಲಿ ಅಂತಹ ವಹಿವಾಟುಗಳಲ್ಲಿ 62% ಒಳಗೊಂಡಿದೆ. ಇದಲ್ಲದೇ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಮೌಲ್ಯದಲ್ಲಿ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯು ಆರ್ಥಿಕ ವರ್ಷ – 2021-22 ರಲ್ಲಿ 9.9% ರಿಂದ ಆರ್ಥಿಕ ವರ್ಷ 2022-23 ರಲ್ಲಿ 7.8% ಕ್ಕೆ ಇಳಿದಿದೆ.
2016 ರಲ್ಲಿ ಪ್ರಾರಂಭವಾದ ಯುಪಿಐ ಭಾರತೀಯ ರಿಸರ್ವ್ ಬ್ಯಾಂಕ್ ಅಡಿಯಲ್ಲಿ ನಿಯಂತ್ರಿತ ಘಟಕದಿಂದ ರಚಿಸಲಾದ ತ್ವರಿತ ಪಾವತಿ ವ್ಯವಸ್ಥೆಯಾಗಿದೆ.