ಸಮಗ್ರ ನ್ಯೂಸ್: ಸರಕಾರದಿಂದ ಅಧಿಕೃತವಾಗಿ ಟಿಪ್ಪು ಜಯಂತಿ ಆಚರಣೆ ಇಲ್ಲದಿದ್ದರೂ, ಇಂದು ಶ್ರೀರಂಗಪಟ್ಟಣದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತಿದೆ. ಟಿಪ್ಪು ವಕ್ಫ್ ಎಸ್ಟೇಟ್‍ನಿಂದ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದ್ದು, ರಾಜ್ಯದ ಹಲವು ಜಿಲ್ಲೆಗಳಿಂದ ಜನರು ಭಾಗವಹಿಸುವ ನಿರೀಕ್ಷೆ ಇದೆ.
ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಕೋಮು ಸಂಘರ್ಷದ ಭೀತಿ ಎದುರಾಗಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶ್ರೀರಂಗಪಟ್ಟಣದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 11ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ತಿಳಿಸಿದ್ದಾರೆ. ಮೆರವಣಿಗೆ ಹಾಗೂ ಪ್ರತಿಭಟನೆಗೆ ನಿರ್ಬಂಧ ವಿಧಿಸಲಾಗಿದ್ದು, ಬ್ಯಾನರ್, ಧ್ವನಿವರ್ಧಕ, ಪಟಾಕಿ ಹಾಗೂ ಡಿಜೆ ಬಳಕೆಯನ್ನು ನಿಷೇಧಿಸಲಾಗಿದೆ.
ಸರ್ಕಾರದ ವತಿಯಿಂದ ನಡೆಸುತ್ತಿದ್ದ ಟಿಪ್ಪು ಜಯಂತಿ ಆಚರಣೆಯನ್ನು 2019ರಲ್ಲಿ ನಿಷೇಧಿಸಲಾಗಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೂ ನಿಷೇಧ ಹಿಂಪಡೆದಿಲ್ಲ. ಇದರ ನಡುವೆ ಖಾಸಗಿಯಾಗಿ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತಿದೆ.