ಸಮಗ್ರ ನ್ಯೂಸ್: ಎರಡು ತಿಂಗಳ ಹಿಂದೆ ಬೆಲೆ ಹೆಚ್ಚಿಸಿಕೊಂಡು ಬೀಗುತ್ತಿದ್ದ ಟೊಮೆಟೊ ಜಾಗವನ್ನು ಈಗ ಈರುಳ್ಳಿ ಆಕ್ರಮಿಸಿದೆ. ಈರುಳ್ಳಿ ಬೆಲೆ ಬುಧವಾರಕ್ಕಿಂತ ದುಪ್ಪಟ್ಟಾಗಿದ್ದು ಗ್ರಾಹಕರು ಬೆಚ್ಚಿ ಬೀಳುತ್ತಿದ್ದಾರೆ. ಬುಧವಾರ ಪ್ರತಿ ಕೆ.ಜಿಗೆ ₹ 30-₹ 40ನಂತೆ ಮಾರಾಟವಾಗಿದ್ದ ಈರುಳ್ಳಿ ಸ್ಥಳೀಯ ಮಾರುಕಟ್ಟೆಯಲ್ಲಿ ಗುರುವಾರ ಪ್ರತಿ ಕೆ.ಜಿಗೆ ₹ 60-₹ 70ನಂತೆ ಮಾರಾಟವಾಗಿದೆ.
ಕಳೆದ ಹತ್ತು ದಿನಗಳಿಂದ ಈರುಳ್ಳಿ ಪೂರೈಕೆಯಲ್ಲಿ ದಿಢೀರ್ ಇಳಿಕೆಯಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಎಂಪಿಸಿ) ಅಧಿಕಾರಿಗಳು ಮತ್ತು ಚಿಲ್ಲರೆ ಮಾರಾಟಗಾರರು ತಿಳಿಸಿದ್ದಾರೆ. ಯಶವನಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ದಿನವೊಂದಕ್ಕೆ 70ರಿಂದ 75 ಮೂಟೆ ಈರುಳ್ಳಿ ಪೂರೈಕೆಯಾಗುತ್ತಿತ್ತು. ಆದರೆ ಸದ್ಯ ಮಾರುಕಟ್ಟೆಗೆ 40ರಿಂದ 50 ಮೂಟೆ ಮಾತ್ರ ಈರುಳ್ಳಿ ಪೂರೈಕೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಶೇ 50ರಷ್ಟು ಏರಿಕೆಯಾಗಿದೆ.
ವರದಿಯ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ತರೀಕೆರೆ ಪ್ರದೇಶದಲ್ಲಿ 10,950 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಮಳೆಯ ಕೊರತೆಯಿಂದಾಗಿ ರೈತರು ಕೇವಲ 6,214 ಹೆಕ್ಟೇರ್‌ನಲ್ಲಿ ಈರುಳ್ಳಿ ಕೊಯ್ಲು ಮಾಡಲು ಸಾಧ್ಯವಾಯಿತು. ಮುಂಗಾರು ಮಳೆಯ ಕೊರತೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ 6,126 ಹೆಕ್ಟೇರ್ ಈರುಳ್ಳಿ ಬೆಳೆ ನಾಶವಾಗಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶದ ಹಲವು ಜಿಲ್ಲೆಗಳಿಗೆ ಮಹಾರಾಷ್ಟ್ರದ ನಾಸಿಕ್ ಮತ್ತು ಸೊಲ್ಲಾಪುರ ಪ್ರದೇಶಗಳಿಂದ ಈರುಳ್ಳಿ ಪೂರೈಕೆಯಾಗುತ್ತದೆ. ಬೇಡಿಕೆಯ ಹಠಾತ್ ಹೆಚ್ಚಳದಿಂದಾಗಿ ಮಹಾರಾಷ್ಟ್ರದಿಂದ ಈರುಳ್ಳಿ ಪೂರೈಕೆಗೆ ತೊಂದರೆಯಾಗಿದೆ. ಕಳೆದ ಎರಡು ವರ್ಷಗಳಿಂದ ಈರುಳ್ಳಿ ಬೆಲೆಯಲ್ಲಿ ಯಾವುದೇ ಏರಿಕೆಯಾಗದ ಕಾರಣ ಈ ವರ್ಷ ಅನೇಕ ಸಾಮಾನ್ಯ ಈರುಳ್ಳಿ ಬೆಳೆಗಾರರು ಇತರ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದ್ದರು ಎಂದು ವರದಿ ತಿಳಿಸಿದೆ.