ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ ನೇತೃತ್ವದಲ್ಲಿ ಸುಳ್ಯದಲ್ಲಿ ನಾಳೆ( ಅ.3) ನಡೆಯಲಿರುವ “ಗಾಂಧೀಸ್ಮೃತಿ ಸಮಾವೇಶ ಹಾಗೂ ಜನಜಾಗೃತ ನಡಿಗೆ” ಭರ್ಜರಿ ತಯಾರಿ ನಡೆಯುತ್ತಿದ್ದು ಇದರ ವಿರುದ್ಧ ಜಾಲತಾಣಗಳಲ್ಲಿ ಬಹಿಷ್ಕಾರದ ಪೋಸ್ಟರ್ ಗಳು ವೈರಲ್ ಆಗುತ್ತಿವೆ.
ಗಾಂಧೀಜಿ ಆಶಯದ ಕಲ್ಪನೆ “ರಾಮರಾಜ್ಯದ ಕನಸು “. ರಾಮರಾಜ್ಯದಲ್ಲಿ ಸ್ತ್ರೀ ಸ್ವಾತಂತ್ರ್ಯ ಹೇಗೆಂದರೆ ನಡು ರಾತ್ರಿಯಲ್ಲೂ ಓರ್ವ ಸ್ತ್ರೀ ಒಬ್ಬಂಟಿಯಾಗಿ ನಡೆಯುವಂತ ವಾತಾವರಣ. ಗಾಂಧೀಜಿ ಸ್ತ್ರೀ ಸ್ವಾತಂತ್ರ್ಯಕ್ಕೆ ಅಷ್ಟು ಮಹತ್ವ ನೀಡಿದ್ದರು. ಈ ಬಗ್ಗೆ ಗಾಂಧೀಜಿ ನೀಡಿದ ಹೇಳಿಕೆಯ ಉಕ್ತಿಯನ್ನು ಉಲ್ಲೇಖಿತ ಪೋಸ್ಟರ್ ನಲ್ಲಿ ಧರ್ಮಸ್ಥಳದ ಸೌಜನ್ಯಳಿಗೆ ನ್ಯಾಯ ಯಾವಾಗ ಮತ್ತು ಈ ಕುರಿತ ನಿಮ್ಮ ನಿಲುವೇನೆಂಬುದನ್ನ ಪ್ರಶ್ನಿಸಲಾಗಿದೆ.
ಗಾಂಧೀ ಸ್ಮೃತಿ ಯ ಕುರಿತಂತೆ ನಡಿಗೆಯನ್ನು ಬಹಿಷ್ಕರಿಸಿದ್ದು, ಗಾಂಧೀ ತತ್ವ ಬೋಧನೆ ಪಾಲನೆ ನಿಮ್ಮಿಂದಲೇ ಆರಂಭಗೊಳ್ಳಲಿ, ಅಮರ ಸುಳ್ಯದ ಮಣ್ಣಿನಲ್ಲಿಅನ್ಯಾಯ ನಡೆಗೆ ಬೆಂಬಲವಿಲ್ಲ, ಗಾಂಧೀಸ್ಮೃತಿ ಕಾರ್ಯಕ್ರಮವೇ ಮತಿಹೀನ ಮತ್ತು ಸ್ಮೃತಿ ಹೀನ ಎಂದು ಪೋಸ್ಟರ್ ಗಳಲ್ಲಿ ಕಟುಶಬ್ಧಗಳ ಒಕ್ಕಣೆಗಳೊಂದಿಗೆ ಸಂತ್ರಸ್ತೆ ಸೌಜನ್ಯ ಮತ್ತು ನ್ಯಾಯ ದ ಹೋರಾಟಗಾರ ನಾಯಕ ಮಹೇಶ್ ಶೆಟ್ಡಿ ತಿಮರೋಡಿಯವರ ನಡಿಗೆಯ ಫೋಟೋ ರಾರಾಜಿಸುತ್ತಿದೆ.
ಇತ್ತೀಚೆಗಷ್ಟೇ ಸುಳ್ಯದಲ್ಲಿ ನಡೆದ ಸೌಜನ್ಯ ಪರ ಪ್ರತಿಭಟನೆಯಲ್ಲಿ ವಿವಿಧ ಪಕ್ಷಗಳ ರಾಜಕೀಯ ನಿರೀಕ್ಷೆಗೂ ಮೀರಿ ಸಾರ್ವಜನಿಕರು ಭಾಗವಹಿಸಿದ್ದು, ಅಭೂತಪೂರ್ವ ಬೆಂಬಲದಿಂದ ಹೋರಾಟದ ನಾಯಕ ತಿಮರೋಡಿ ಸಂತಸಗೊಂಡಿದ್ದರು. ಆದರೆ ಪ್ರಮುಖ ಮುಂಚೂಣಿಯ ರಾಜಕೀಯ ನಾಯಕರು ಗೈರಾಗಿದ್ದಕ್ಕೆ ಆಕ್ರೋಶ ವ್ಯಕ್ತಗೊಂಡಿತ್ತು.
ಇದೀಗ ಗಾಂಧೀಸ್ಮೃತಿ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿ ನಿಂತಿರುವ ಅದೇ ಪ್ರಮುಖ ನಾಯಕರನ್ನು ಪೋಸ್ಟರ್ ನೊಂದಿಗೆ ತೀವ್ರ ತರಾಟೆಗೆ ತೆಗೆದುಕೊಳ್ಳುತಿದ್ದಾರೆ. ನಾಳೆ ನಡೆಯಲಿರುವ ಈ
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಭಾಗವಹಿಸಲಿದ್ದು, ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ.