ಸಮಗ್ರ ನ್ಯೂಸ್: ಮೋದಿ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಒಪ್ಪಿಗೆ ಸಿಕ್ಕಿದ್ದು, ಈ ಬೆನ್ನಲ್ಲೇ ಇಂದು ಈ ಮಹತ್ವದ ಬಿಲ್ ಮಂಡನೆ ಮಾಡಲಾಗಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಅವರು ಲೋಕಸಭೆಯಲ್ಲಿ ಹೊಸ ಸಂಸತ್ ಭವನದಲ್ಲಿ ಮಂಡಿಸಿದರು.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸೀಟುಗಳನ್ನು ಮೀಸಲಿಡುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.
ಈ ನಡುವೆ, ಈ ಮಹಿಳಾ ಮೀಸಲಾತಿ ಬಿಲ್ ನಮ್ಮದು ಎಂದು ವಿಪಕ್ಷಗಳು ಕ್ರೆಡಿಟ್ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದು, ಈ ಹಿನ್ನೆಲೆ ಗದ್ದಲ ಗಲಾಟೆಯ ನಡುವೆಯೇ ಬಿಲ್ ಮಂಡನೆಯಾಗಿದೆ. Nari Shakti Vandan Adhiniyam ಎಂದು ಈ ಬಿಲ್ ಅನ್ನು ಕರೆಯಲಾಗಿದೆ. ಆದರೆ, ಲೋಕಸಭೆಯ ಕಲಾಪ ನಾಳೆಗೆ ಮುಂದೂಡಿಕೆಯಾಗಿದ್ದು, ಈ ಹಿನ್ನೆಲೆ ಈ ಬಿಲ್ ಬಹುತೇಕ ನಾಳೆ ಲೋಕಸಭೆಯಲ್ಲಿ ಪಾಸಾಗಲಿದೆ ಎನ್ನಲಾಗುತ್ತಿದೆ.
ಇನ್ನು, ಈ ಬಿಲ್ ಮಂಡನೆಗೂ ಮುನ್ನ ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ “ಹೊಸ ಸಂಸತ್ ಕಟ್ಟಡದಲ್ಲಿ ಈ ಐತಿಹಾಸಿಕ ಸಂದರ್ಭದಲ್ಲಿ, ಸದನದ ಮೊದಲ ಕಲಾಪವಾಗಿ, ಎಲ್ಲಾ ಸಂಸದರು ಮಹಿಳಾ ಶಕ್ತಿಗಾಗಿ ಹೆಬ್ಬಾಗಿಲುಗಳನ್ನು ತೆರೆಯುವ ಪ್ರಾರಂಭವನ್ನು ಈ ನಿರ್ಣಾಯಕ ನಿರ್ಧಾರದಿಂದ ಮಾಡಲಾಗುತ್ತಿದೆ. ಮಹಿಳೆಯರ ನೇತೃತ್ವದ ಅಭಿವೃದ್ಧಿಯ ನಮ್ಮ ಸಂಕಲ್ಪವನ್ನು ಮುಂದಕ್ಕೆ ತೆಗೆದುಕೊಂಡು, ನಮ್ಮ ಸರ್ಕಾರವು ಮಹತ್ವದ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಹೇಳಿದರು.