ಸಮಗ್ರ ನ್ಯೂಸ್: ರಷ್ಯಾದ ಬಾಹ್ಯಾಕಾಶ ನೌಕೆ ಲೂನಾ 25 ಪತನವಾಗಿ ಕಕ್ಷೆ ಸೇರುವಲ್ಲಿ ವಿಫಲವಾಗಿದೆ. ತಾಂತ್ರಿಕ ದೋಷದಿಂದಾಗಿ ಚಂದ್ರನ ಮೇಲ್ಮೈಗೆ ಬಾಹ್ಯಾಕಾಶ ನೌಕೆ ಡಿಕ್ಕಿ ಹೊಡೆದಿದೆ ಎಂದು ರಷ್ಯಾ ಬ್ಯಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ಹೇಳಿದೆ.
ಚಂದ್ರಯಾನ 3 ಉಡಾವಣೆ ಬಳಿಕ ಆಗಸ್ಟ್ 11 ರಂದು ರಷ್ಯಾ ಈ ರಾಕೆಟ್ ಉಡಾವಣೆ ಮಾಡಿತ್ತಾದರೂ ಭಾರತಕ್ಕೂ ಮೊದಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಲು ಪ್ಲಾನ್ ಮಾಡಿತ್ತು. ಆದರೆ ಇದು ಸಫಲವಾಗಿಲ್ಲ.
ಆಗಸ್ಟ್ 21 ರಂದು ನೌಕೆಯನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಲು ರೋಸ್ಕೋಸ್ಮಾಸ್ ಉದ್ದೇಶಿಸಿತ್ತು. ಆದರೆ ನೌಕೆಯು ತಪ್ಪಾದ ಕಕ್ಷೆಗೆ ಜಾರಿ ಸಂಪರ್ಕ ಕಳೆದುಕೊಂಡು ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆದಿದೆ.
1976ರ ಬಳಿಕ ರಷ್ಯಾ ಇದೀಗ ಅಂದರೆ 2023ರಲ್ಲಿ ಚಂದ್ರನ ಅನ್ವೇಷಣೆಗೆ ನೌಕೆಯನ್ನು ಕಳಿಸಿಕೊಟ್ಟಿತ್ತು. ಒಂದು ವೇಳೆ ರಷ್ಯಾದ ಈ ಮಿಷನ್ ಯಶಸ್ವಿಯಾಗಿದ್ದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಿದ ಮೊದಲ ರಾಷ್ಟ್ರ ಎಂಬ ಖ್ಯಾತಿಗೆ ಭಾಜನವಾಗುತ್ತಿತ್ತು. ಆದರೆ 47 ವರ್ಷಗಳ ಬಳಿಕ ಚಂದ್ರನ ಅಂಗಳಕ್ಕೆ ಇಳಿಯುವ ಅವಕಾಶ ಕೈತಪ್ಪಿದೆ.