ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯನ ಕಥೆಯನ್ನು ಸಿನಿಮಾ ಮಾಡಲು ಸಿನಿಮಾ ತಂಡವೊಂದು ನಿರ್ಧರಿಸಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೆಸರು ನೋಂದಾಯಿಸಿದ ಬೆನ್ನಲ್ಲೇ ಸಿನಿಮಾವನ್ನು ನಿರ್ಮಾಣಕ್ಕೆ ಸೌಜನ್ಯ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೌಜನ್ಯಳ ಮಾವ ವಿಠಲ ಗೌಡ, ನಮ್ಮ ಒಪ್ಪಿಗೆ ಪಡೆಯದೇ ಅವರು ಹೇಗೆ ಸಿನಿಮಾ ಮಾಡುತ್ತಾರೆ? ನಮ್ಮನ್ನು ದಾರಿ ತಪ್ಪಿಸುವುದಕ್ಕೆ ಹೀಗೆ ಮಾಡುತ್ತಿದ್ದಾರೆಯೇ? ನಮ್ಮ ಉದ್ದೇಶ ಸಿನಿಮಾ ಮಾಡುವುದು ಅಲ್ಲ. ನಮಗೆ ನ್ಯಾಯ ಸಿಗಬೇಕು ಅಷ್ಟೇ ಎಂದಿದ್ದಾರೆ. ಅಲ್ಲದೇ ಯಾರಾದರೂ ಸಿನಿಮಾ ಮಾಡುವುದಕ್ಕೆ ಮುಂದಾದರೆ ಹೈಕೋರ್ಟ್ ನಿಂದ ಅದಕ್ಕೆ ತಡೆಯಾಜ್ಞೆ ತರುತ್ತೇವೆ ಎಂದಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಸ್ಟೋರಿ ಆಫ್ ಸೌಜನ್ಯ’ ಟೈಟಲ್ ನೋಂದಣಿ ಆಗಿದೆ. ಜಿಕೆ ವೆಂಚರ್ಸ್ ಈ ಟೈಟಲ್ ನೋಂದಣಿ ಮಾಡಿಸಿದೆ. ವಿ. ಲವ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಸೌಜನ್ಯ ಕುಟುಂಬಸ್ಥರು ಸಿನಿಮಾ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.