ಸಮಗ್ರ ನ್ಯೂಸ್: ರಸ್ತೆ ಬದಿ ಕಸ ಎಸೆದ ಕಿಡಿಗೇಡಿಗಳಿಗೆ ಪರಿಸರವಾಸಿಯಿಂದ ಶ್ರದ್ಧಾಂಜಲಿ ಅರ್ಪಿಸಿದ ಘಟನೆ ಪುತ್ತೂರು ತಾಲೂಕಿನ ಬೆದ್ರಾಲ ಎಂಬಲ್ಲಿ ಕಂಡು ಬಂದಿದೆ.
ಬೆದ್ರಾಲ ಹೌಸ್ ರಸ್ತೆಯಲ್ಲಿ ಕಿಡಿಗೇಡಿಗಳು ಬಿಳಿ ಬಣ್ಣದ ಗೋಣಿ ಚೀಲದಲ್ಲಿ ಖಾಲಿ ಬೀಯರ್ ಬಾಟಲಿ ಮತ್ತು ಕಸಗಳನ್ನು ತುಂಬಿಸಿ ಎಸೆದು ಹೋಗಿದ್ದಾರೆ. ಇದನ್ನು ಕಂಡ ಪರಿಸರವಾಸಿಗಳು ಬಿಸಾಕಿ ಹೋಗಿದ್ದ ಕಸದ ಗೋಣಿ ಚೀಲದ ಬಳಿ ಈ ಕೃತ್ಯ ಎಸಗಿದವರಿಗೆ ಶ್ರದ್ದಾಂಜಲಿ ಅರ್ಪಿಸಿ ಅವರಿಗೆ ಸದ್ಗತಿ ಕೋರುವ ಮತ್ತು ಅವರ ಕುಟುಂಬಕ್ಕೆ ಸದ್ಬುದ್ಧಿಯನ್ನು ನೀಡುವಂತೆ ಪರಮಾತ್ಮನಲ್ಲಿ ಕೋರುವ ಬರಹವನ್ನು ಅಳವಡಿಸಿದ್ದಾರೆ. ಇದು ಒಂದೆಡೆ ಹಾಸ್ಯಾಸ್ಪದವಾಗಿ ಕಂಡರೂ ಕೂಡಾ ಮತ್ತೊಂದೆಡೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ಎಚ್ಚರಿಕೆ ಸಂದೇಶವನ್ನು ನೀಡುತ್ತಿದೆ.
ಈ ಹಿಂದೆ ನಗರಸಭೆಯು ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು, ಎಸೆದವರು ಯಾರೆಂದು ತಿಳಿದರೆ ದಂಡ ವಿಧಿಸುವುದು ಎಂದು ಮುನ್ನೆಚ್ಚರಿಕೆ ನೀಡುತ್ತಿದ್ದರೂ ಸಾರ್ವಜನಿಕರು ರಸ್ತೆ ಬದಿ ಕಸವನ್ನು ಎಸೆದು ಪರಿಸರ ನಾಶ ಮಾಡುತ್ತಿರುವುದು ವಿಪರ್ಯಾಸ.