ಸಮಗ್ರ ನ್ಯೂಸ್: ಸುಳ್ಯ ನಗರ ಸಮೀಪದ ಶಾಂತಿನಗರ ತಾಲೂಕು ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿ ಹಿನ್ನಲೆಯಲ್ಲಿ ಮೈದಾನದಲ್ಲಿ ಅಗೆದ ಮಣ್ಣನ್ನು ಕೆಳ ಭಾಗದಲ್ಲಿ ತುಂಬಿಡಲಾಗಿರುವ ಬೃಹತ್ ಪ್ರಮಾಣದ ಮಣ್ಣಿನ ರಾಶಿಯಲ್ಲಿ ಬಿರುಕು ಉಂಟಾಗಿ ಕುಸಿತ ಆರಂಭಗೊಂಡಿದೆ, ಕುಸಿಯದಂತೆ ತಡೆಗೋಡೆ ನಿರ್ಮಾಣ ಇನ್ನೂ ನಡೆಯದೇ ಇರುವುದರಿಂದ ಸ್ಥಳೀಯ ನಿವಾಸಿಗಳಲ್ಲಿ ಮಳೆಗಾಲದ ಆರಂಭದಲ್ಲೇ ಆತಂಕದ ಭೀತಿ ಎದುರಾಗಿದೆ.
ಸುಳ್ಯದ ಶಾಂತಿನಗರದ ತಾಲೂಕು ಕ್ರೀಡಾಂಗಣವನ್ನು ಅಭಿವೃದ್ಧಿ ಮಾಡಲು ಸಮತಟ್ಟು ಮಾಡುವ ಸಂದರ್ಭದಲ್ಲಿ ತೆಗೆಯಲಾದ ಮಣ್ಣನ್ನು ಕ್ರೀಡಾಂಗಣದ ಕೆಳ ಭಾಗದಲ್ಲಿರುವ ಪ್ರದೇಶದಲ್ಲಿ ಸುರಿಯಲಾಗಿದೆ. ಕಳೆದ ಮಳೆಗಾಲದಲ್ಲಿ ಮೈದಾನದ ನೀರು ಕೆಳ ಭಾಗದಲ್ಲಿ ಹರಿದ ಪರಿಣಾಮ ಮಣ್ಣು ಕುಸಿತ ಉಂಟಾಗಿತ್ತು. ಬಳಿಕ ಟಾರ್ಪಲು ಹಾಸಿ ತಾತ್ಕಲಿಕ ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಮಣ್ಣಿನ ರಾಶಿಯಲ್ಲಿ ಬಿರುಕು ಕಾಣಿಸಿಕೊಂಡು ಕುಸಿತ ಆರಂಭಗೊಂಡಿದೆ. ಮಳೆಗಾಲ ಆರಂಭವಾಗುವ ಸಮಯ ಬಂದಿದ್ದರೂ ತಡೆಗೋಡೆ ನಿರ್ಮಾಣವಾಗದೇ ಇರುವುದರಿಂದ ಕೆಳ ಭಾಗದಲ್ಲಿರುವ ಆರು ಕುಟುಂಬಗಳಲ್ಲಿ ಪ್ರಾಣ ಭಯದ ವಾತಾವರಣ ನಿರ್ಮಿಸಿದೆ. ಅವೈಜ್ಞಾನಿಕವಾಗಿ ಲೋಡುಗಟ್ಟಲೆ ಮಣ್ಣನ್ನು ಈ ಭಾಗದಲ್ಲಿ ಸುರಿಯಲಾಗಿದೆ ಎಂಬುದು ಸ್ಥಳೀಯರ ಆರೋಪ.
ಅವೈಜ್ಞಾನಿಕ ಮಣ್ಣಿ ರಾಶಿ;
ಎತ್ತರವಾಗಿದ್ದ ಕ್ರೀಡಾಂಗಣವನ್ನು ಸಮತಟ್ಟು ಮಾಡುವ ಸಂದರ್ಭದಲ್ಲಿ ತೆಗೆದ ಮಣ್ಣನ್ನು ಕ್ರೀಡಾಂಗಣದ ಕೆಳ ಭಾಗದಲ್ಲಿರುವ ಪ್ರದೇಶದಲ್ಲಿ ಸುರಿಯಲಾಗಿದೆ. ಅವೈಜ್ಞಾನಿಕವಾಗಿ ಲೋಡುಗಟ್ಟಲೆ ಮಣ್ಣನ್ನು ಈ ಭಾಗದಲ್ಲಿ ಸುರಿಯಲಾಗಿದ್ದು, ಸುಮಾರು ೧೦೦ ಅಡಿಗೂ ಎತ್ತರದಲ್ಲಿ ಮಣ್ಣನ್ನು ರಾಶಿ ಹಾಕಲಾಗಿದೆ. ಕ್ರೀಡಾಂಗಣ ಕೆಳಭಾಗದಲ್ಲಿ ಸುಮಾರು ೧೦೦ ಅಡಿ ಎತ್ತರಕ್ಕೆ, ೧೦೦ ಮೀಟರ್ ಅಗಲಕ್ಕೆ ಮಣ್ಣು ತುಂಬಿಡಲಾಗಿದೆ. ಕಳೆದ ಮಳೆಗಾಲದಲ್ಲೂ ಮಣ್ಣಿನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆ ಸಂದರ್ಭದಲ್ಲಿ ತಾತ್ಕಲಿಕ ಕ್ರಮಕೈಗೊಳ್ಳಲಾಗಿತ್ತು. ಇದೀಗ ಆರಂಭದ ಮಳೆಗೆ ಮಣ್ಣಿನ ರಾಶಿಯಲ್ಲಿ ಬಿರುಕು ಬಿಟ್ಟಿದ್ದು, ನೀರು ಹರಿದ ಪರಿಣಾಮ ಮಣ್ಣು ಕುಸಿಯತೊಡಗಿದೆ. ಇನ್ನೇನು ಮಳೆಗಾಲ ಆರಂಭಗೊಳ್ಳಲಿದ್ದು, ಮತ್ತೆ ಸಮಸ್ಯೆ ಎದುರಾಗುವ ಆತಂಕ ಸ್ಥಳೀಯರದ್ದು.
ನಿರ್ಮಾಣವಾಗಲೇ ಇಲ್ಲ ತಡೆಗೋಡೆ;
ಇಲ್ಲಿನ ಸಮಸ್ಯೆ ಬಗ್ಗೆ ಕಳೆದ ವರ್ಷ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು. ಬಳಿಕ ರಾಜಕೀಯವಾಗಿ ಆರೋಪ ಪ್ರತ್ಯಾರೋಪ ಕೇಳಿಬಂದಿತ್ತು. ಅಂದಿನ ಸಚಿವ ಎಸ್.ಅಂಗಾರ, ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಮುಂದಿನ ವರ್ಷ ತಡೆಗೋಡೆ ನಿರ್ಮಿಸುವ ಭರವಸೆಯನ್ನೂ ನೀಡಿದ್ದರು.
ಕಳೆದ ವರ್ಷ ತಾತ್ಕಲಿಕವಾಗಿ ಕುಸಿಯದಂತೆ ಪ್ಲಾಸ್ಟಿಕ್ ಟಾರ್ಪಲು ಹೊದಿಸಲಾಗಿತ್ತು. ಇದೀಗ ಪ್ಲಾಸ್ಟಿಕ್ ಟರ್ಪಲ್ ಸಂಪೂರ್ಣ ಹರಿದು ಹೋಗಿದ್ದು ಮಳೆಗಾಲದಲ್ಲಿ ಹಾಕಿದ ಮಣ್ಣಿನಲ್ಲಿ ಭಾರಿ ಗಾತ್ರದ ಬಿರುಕು ಕಾಣಿಸಿಕೊಂಡಿದೆ. ತಡೆಗೋಡೆ ಈ ಮಳೆಗಾಲದ ಮೊದಲು ನಿರ್ಮಾಣವಾಗಲಿದೆಯೇ ಎಂಬ ಪ್ರಶ್ನೆ ಸ್ಥಳೀಯರದ್ದು. ಆದಷ್ಟು ಬೇಗ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಸಬೇಕು ಎಂಬ ಅಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ.
ಕರಾವಳಿಯಲ್ಲಿ ಮಣ್ಣು ಕುಸಿತದಿಂದ ಅವಘಡಗಳು ನಡೆದು ಪ್ರಾಣ ಹಾನಿ ಸಂಭವಿಸುತ್ತಿದ್ದು, ಜಿಲ್ಲಾಡಳಿತವೂ ಇಂತಹ ಆತಂಕದ ಪ್ರದೇಶಗಳಲ್ಲಿ ಆದ್ಯತೆ ನೆಲೆಯಲ್ಲಿ ಶಾಶ್ವತ ಪರಿಹಾರ ಕಾಮಗಾರಿ ನಡೆಸಲು ಮುಂದಾಗಬೇಕಿದೆ ಎಂಬ ಒತ್ತಾಯವೂ ಕೇಳಿಬರುತ್ತಿದೆ. ಕಳೆದ ವರ್ಷ ಕಾಮಗಾರಿ ಆರಂಭಗೊಂಡಿದ್ದು, ನಿಧಾನಗತಿಯಿಂದ ಕಾಮಗಾರಿ ನಡೆಯುತ್ತಿದ್ದು, ಇದೀಗ ಇಲ್ಲಿ ಮಣ್ಣಿನ ರಾಶಿಯನ್ನು ಜೆಸಿಬಿ ಮೂಲಕ ಸ್ಟೆಪ್ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ, ಮಳೆ ಹರಿಯಲು ಬೃಹತ್ ಪೈಪ್‌ಗಳನ್ನು ಅಳವಡಿಲು ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದ್ದು, ಪೈಪುಗಳನ್ನು ತಂದು ಹಾಕಲಾಗಿದೆ.
ಕೋಟ್ ೧:
ಕ್ರೀಡಾಂಗಣ ಅಭಿವೃದ್ಧಿ ಹಿನ್ನಲೆಯಲ್ಲಿ ರಾಶಿ ಹಾಕಿರುವ ಮಣ್ಣಿನ ರಾಶಿಯಿಂದ ಮಳೆಗಾಲದಲ್ಲಿ ಸಮಸ್ಯೆ ಉಂಟಾಗದಂತೆ ತಡೆಯಲು ಇನ್ನೂ ಶಾಶ್ವತ ಪರಿಹಾರದ ಕಾಮಗಾರಿ ನಡೆದಿಲ್ಲ. ಮಣ್ಣು ಕುಸಿಯದಂತೆ ಶೀಘ್ರ ಶಾಶ್ವತ ಕ್ರಮಕೈಗೊಂಡು ನಮ್ಮ ಆತಂಕವನ್ನು ದೂರ ಮಾಡಲು ಸಂಬಂಧಿಸಿದವರು ಕೂಡಲೇ ಮುಂದಾಗಲಿ.
:- ನವನೀತ್ ಬೆಟ್ಟಂಪಾಡಿ, ಸ್ಥಳೀಯ ನಿವಾಸಿ