ಸಮಗ್ರ ನ್ಯೂಸ್: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿ.ಟಿ. ರವಿ ಈಗ ವಿವಾದವೊಂದಕ್ಕೆ ಸಿಲುಕಿದ್ದಾರೆ. ಮಾಂಸಹಾರ ಸೇವಿಸಿ ಅವರು ನಾಗಬನಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದ್ದು, ಇದರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಉತ್ತರ ಕನ್ನಡ ಜಿಲ್ಲೆಗೆ ಸಿ.ಟಿ ರವಿ ಭೇಟಿ ನೀಡಿದ ಸಂದರ್ಭದಲ್ಲಿ ಕಾರವಾರದಲ್ಲಿ ಶಾಸಕ ಸುನಿಲ್ ನಾಯಕ್ ಅವರ ಮನೆಯಲ್ಲಿ ಮಾಂಸಹಾರ ಸೇವನೆ ಮಾಡಿದ್ದರು. ಅದಾದ ಬಳಿಕ ಅವರು ನಾಗಬನ ಹಾಗೂ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಮೂರು ದಿನಗಳ ಹಿಂದೆ ಅಂದರೆ ಫೆಬ್ರವರಿ 19ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದೀಗ ಕಾಂಗ್ರೆಸ್ ನಾಯಕರು ಇದೇ ವಿಷಯವನ್ನು ಇಟ್ಟುಕೊಂಡು ಸಿ.ಟಿ. ರವಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಇನ್ನು ಈ ವಿಚಾರ ಕುರಿತಂತೆ ಸಿ.ಟಿ. ರವಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಶಾಸಕ ಸುನಿಲ್ ನಾಯಕ್ ಅವರ ಮನೆಯಲ್ಲಿ ಸಿ.ಟಿ. ರವಿ ಭೋಜನ ಸವಿಯುತ್ತಿರುವ ಹಾಗೂ ದೇಗುಲಕ್ಕೆ ಭೇಟಿ ನೀಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಕುರಿತಂತೆ ಮಂಡ್ಯದಲ್ಲಿ ಸ್ಪಷ್ಟನೆ ನೀಡಿದ ಸಿ.ಟಿ ರವಿ, ನಾನು ಮಾಂಸ ತಿನ್ನುವ ಜಾತಿಯಲ್ಲಿ ಹುಟ್ಟಿದ್ದೀನಿ, ಆದರೆ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಬಟ್ಕಳದಲ್ಲಿರುವ ಹನುಮನ ದೇವಸ್ಥಾನವಾಗಿತ್ತು, ಅಂದು ಬಾಗಿಲು ಹಾಕಿದ್ದರಿಂದ ದೂರದಿಂದಲೇ ಕೈ ಮುಗಿದಿದ್ದೆನು, ದೇವರ ಬಗ್ಗೆ ನನಗೆ ಶ್ರದ್ದೆ ಇದೆ ಎಂದು ಹೇಳಿದ್ದಾರೆ.