ಸಮಗ್ರ ನ್ಯೂಸ್: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಷಾ ಪುತ್ತೂರಿಗೆ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರಿನ ರಸ್ತೆಗಳಿಗೆ ತೇಪೆಭಾಗ್ಯ ಲಭಿಸಿದೆ. ರಸ್ತೆಗಳಿಗೆ ತೇಪೆ ಹಚ್ಚುವ ಕಾರ್ಯ ನಡೆದಿದ್ದು, ಒಂದರ್ಥದಲ್ಲಿ ಅಮಿತ ಷಾರಿಗೆ ಹಸಿ ತೇಪೆಯ ಸ್ವಾಗತ ಲಭಿಸಲಿದೆ.
ವಿಪರ್ಯಾಸವೆಂದರೆ ತೇಪೆ ಹಾಕಿದರೂ ಎಷ್ಟು ದಿನ ಉಳಿಯಲಿದೆ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ. ಪುತ್ತೂರಿನ ಹನುಮಗಿರಿಯ ದೇವಾಲಯಕ್ಕೆ ಬಳಿಕ ಕ್ಯಾಂಪ್ಕೋ ಕಾರ್ಯಕ್ರಮಕ್ಕೆ ಪುತ್ತೂರಿಗೆ ಫೆ.11ರಂದು ಅಮಿತ್ ಷಾ ಆಗಮಿಸುತ್ತಿರುವ ಕಾರಣ ಹೊಂಡಮಯ ರಸ್ತೆಗಳಿಗೆ ಕಳಪೆ ತೇಪೆಯೊಂದಿಗೆ ತಾತ್ಕಾಲಿಕ ಮುಕ್ತಿ ಸಿಗುತ್ತಿದೆ.
ಅಮಿತ್ ಷಾ ಪುತ್ತೂರಿಗೆ ಬಂದು ವಾಪಾಸ್ ದಿಲ್ಲಿಗೆ ತಲುಪುವ ವೇಳೆಗೆ ಈ ರಸ್ತೆ ಮತ್ತೆ ಹಿಂದಿನ ಸ್ಥಿತಿಗೆ ತಲುಪದಿದ್ದರೆ ಸಾಕು ಎಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ.