ಸಮಗ್ರ ನ್ಯೂಸ್: ಕಸ್ಟಮ್ಸ್ ಅಧಿಕಾರಿ ಎಂದು ನಂಬಿಸಿ ಹಲವಾರು ಶಿಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಲಕ್ಷಾಂತರ ರೂ ಪಂಗನಾಮ ಹಾಕಿದ ಖದೀಮ ಮೈಸೂರು ಪೊಲೀಸರ ಅತಿಥಿಯಾಗಿದ್ದಾನೆ.
ಗೂಗಲ್ ನಲ್ಲಿ ಸರ್ಚ್ ಮಾಡಿ ಶಾಲೆಗಳನ್ನ ಸಂಪರ್ಕಿಸಿ ಶಿಕ್ಷಕರ ಮೊಬೈಲ್ ನಂಬರ್ ಗಳನ್ನ ಸಂಗ್ರಹಿಸಿ ತಾನು ಹಳೆ ವಿಧ್ಯಾರ್ಥಿ ಎಂದು ನಂಬಿಸಿದ್ದಾನೆ. ನಂತರ ತಾನು ಕಸ್ಟಮ್ಸ್ ಅಧಿಕಾರಿ ಎಂದು ಸುಳ್ಳು ಹೇಳಿ ಕಡಿಮೆ ಬೆಲೆಯಲ್ಲಿ ಚಿನ್ನಾಭರಣ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನ ಕೊಡಿಸುವುದಾಗಿ ನಂಬಿಸಿ 7,48,000/- ರೂ ವಂಚಿಸಿದ್ದಾನೆ.
ಬೆಂಗಳೂರಿನ ವಿವಿದ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ದ 6 ಪ್ರಕರಣಗಳು ದಾಖಲಾಗಿದೆ. ಖರ್ತನಾಕ್ ಆರೋಪಿ ಮೈಸೂರಿನಲ್ಲಿ ಅಡಗಿರುವ ಮಾಹಿತಿ ಅರಿತ ಸೆನ್ ಠಾಣೆ ಪೊಲೀಸರು ಜಾಲ ಬೀಸಿ ಬಂಧಿಸಿದ್ದಾರೆ ಆರೋಪಿಯಿಂದ ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಹಿಂದೆ ಈತ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋದಲ್ಲಿ ಕೆಲಸ ಮಾಡಿದ್ದು ನಂತರ ಅಮೆಜಾನ್ ನಲ್ಲಿ ಸ್ಕ್ಯಾನರ್ ಆಗಿ ಕೆಲಸ ಮಾಡಿರುವುದಾಗಿ ವಿಚಾರಣೆಯಲ್ಲಿ ತಿಳಿದು ಬಂದಿದೆ ಡಿಸಿಪಿ ಪ್ರದೀಪ್ ಗುಂಟಿ ಮಾರ್ಗದರ್ಶನದಲ್ಲಿ ಸೆನ್ ಠಾಣೆಯ ಇನ್ಸ್ಪೆಕ್ಟರ್ ಜಯಕುಮಾರ್ ಹಾಗೂ ಸಿಬ್ಬಂದಿಗಳು ಆರೋಪಿಯ ಬಂಧನ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.