ಬೆಂಗಳೂರು: ಶಿಕ್ಷಕರ ವರ್ಗಾವಣೆ ಕರಡು ನಿಯಮಕ್ಕೆ ಸಚಿವರು ಸಮ್ಮತಿಸಿದ್ದು, ಒಂದೇ ಬಾರಿ ಪರಸ್ಪರ ವರ್ಗಾವಣೆ ನಿಯಮ ರದ್ದು ಮಾಡಿ ಶೀಘ್ರವೇ ಆಕ್ಷೇಪಣೆ ಆಹ್ವಾನಿಸುವ ಸಾಧ್ಯತೆ ಇದೆ.
ಶಿಕ್ಷಕರ ವರ್ಗಾವಣೆ ಕಾಯ್ದೆಗೆ ಅನುಮತಿ ನೀಡಿರುವ ಸರ್ಕಾರ ವರ್ಗಾವಣೆಯ ಕರುಡು ನಿಯಮಗಳನ್ನು ರೂಪಿಸಿ ಆಕ್ಷೇಪಣೆ ಆಹ್ವಾನಿಸಲಿದೆ.
ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ವರ್ಗಾವಣೆ ಕಾಯ್ದೆಗೆ ಅನುಮೋದನೆ ಪಡೆಯಲಾಗಿದ್ದು, ಕಾನೂನು ಪ್ರಕಾರ ಸಚಿವರ ಒಪ್ಪಿಗೆ ಬೇಕಿದೆ. ಮಂಗಳವಾರ ಸಚಿವರ ಅನುಮೋದನೆ ಸಿಕ್ಕಿದ್ದು ಕರಡು ನಿಯಮ ರೂಪಿಸಿ ಆಕ್ಷೇಪಣೆಯ ಆಹ್ವಾನಿಸಲಾಗುವುದು. ಇದಕ್ಕೆ 15 ದಿನಗಳ ಕಾಲಾವಕಾಶ ನೀಡಲಿದ್ದು, ಆಕ್ಷೇಪಣೆ ನಂತರ ಅಂತಿಮ ಅಧಿಸೂಚನೆ ಮತ್ತು ವೇಳಾಪಟ್ಟಿ ಪ್ರಕಟಿಸಲಾಗುವುದು.
ಪರಸ್ಪರ ವರ್ಗಾವಣೆಗೆ ಒಂದು ಬಾರಿ ಮಾತ್ರ ಅವಕಾಶ ಎಂಬ ಮಿತಿ ತೆಗೆದು ಹಾಕಲಾಗಿದೆ. ಕಲ್ಯಾಣ ಕರ್ನಾಟಕ, ಮಲೆನಾಡು ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಕ್ಷೇತ್ರಗಳಿಗೆ ವರ್ಗಾವಣೆಯಾಗುವ ಶಿಕ್ಷಕರಿಗೆ ವರ್ಗಾವಣೆ ಮಿತಿ ಸಡಿಲಿಕೆ ಮಾಡಲಾಗಿದೆ.
25 ಕ್ಕಿಂತ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇರುವ ಕ್ಷೇತ್ರಗಳ ಒಳಗೆ ವರ್ಗಾವಣೆಗೆ ಅವಕಾಶ ಕಲ್ಪಿಸಿದ್ದು, ಮರು ಹೊಂದಾಣಿಕೆ ಸಂದರ್ಭದಲ್ಲಿ ಶಿಕ್ಷಕರು ಹಿಂದಿನ ಶಾಲೆಗಳಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಲಾಗುತ್ತದೆ. ಪತಿ-ಪತ್ನಿ ಪ್ರಕರಣದಲ್ಲಿ ಶೈಕ್ಷಣಿಕ ತಾಲೂಕಿನಲ್ಲಿ ಹುದ್ದೆ ಖಾಲಿ ಇಲ್ಲದ ವೇಳೆ ಅದೇ ಜಿಲ್ಲೆಯ ಬೇರೆ ತಾಲೂಕಿನಲ್ಲಿ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗುವುದು. ಇನ್ನು ಈ ವರ್ಷದೊಳಗೆ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ ಎನ್ನಲಾಗಿದೆ.