ರಾಯಚೂರು: ಲಾಕ್ಡೌನ್ ನಿಯಮಗಳನ್ನು ಗಾಳಿಗೆ ತೂರಿ ಊರ ಜನ ತಹಶೀಲ್ದಾರ್ ಕಚೇರಿ ಮುಂದೆಯೇ ಕುರಿಬಲಿ ಕೊಟ್ಟು ದೇವರ ಹರಕೆ ತೀರಿಸಿದ ಘಟನೆ ನಡೆದಿದೆ.
ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಹೇರಿದ್ದರೂ, ಜನ ತಲೆಕೆಡಿಸಿಕೊಳ್ಳದೇ ತಮ್ಮಪಾಡಿಗೆ ತಾವು ಓಡಾಡಿಕೊಂಡಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಆರು ಕುರಿಗಳ ತಲೆ ಕಡಿದು ಹಬ್ಬ ಆಚರಿಸಿದ್ದಾರೆ. ಬೆಳಗಿನ ಜಾವ ಡೊಳ್ಳು, ನಗಾರಿ ಸಹಿತ ಮೆರವಣಿಗೆ ಬಂದು ಕುರಿಗಳನ್ನು ಬಲಿ ನೀಡಿ ದೇವರಿಗೆ ಹರಕೆ ತೀರಿಸಿದ್ದಾರೆ. ಲಾಕ್‍ಡೌನ್ ವೇಳೆ ಧಾರ್ಮಿಕ ಆಚರಣೆಗಳಿಗೆ ನಿಷೇಧವಿದ್ದರೂ ನಿಷೇಧಿತ ಮೂಢನಂಬಿಕೆ ಆಚರಣೆಗಳಲ್ಲು ಜನ ಮುಳುಗಿ ಹೋಗಿದ್ದಾರೆ. ತಹಶಿಲ್ದಾರ್ ಕಚೇರಿ ಮುಂದೆ 6 ಕಡೆಗಳಲ್ಲಿ ರಕ್ತದ ಗುರುತುಗಳು ಇದ್ದು. ಬೇವಿನ ಸೊಪ್ಪು, ಕುಂಕುಮ, ಬಲಿ ಪೂಜೆ ಮಾಡಿರುವ ಎಲ್ಲಾ ಗುರುತುಗಳು ಪತ್ತೆಯಾಗಿವೆ.
ಈಗ ಮದುವೆ ಮುಹೂರ್ತಗಳು ಹೆಚ್ಚಾಗಿರುವುದರಿಂದ ಮದುವೆ ನಿಶ್ಚಯವಾದವರು, ಮದುವೆಯಾದವರು ಮಾರೆಮ್ಮ, ಜಮಲಮ್ಮದೇವಿಗೆ ಹರಕೆ ತೀರಿಸಲು ಸಂಪ್ರದಾಯದಂತೆ ಕುರಿ ಬಲಿ ನೀಡುತ್ತಾರೆ ಎನ್ನಲಾಗಿದೆ.