ಸಮಗ್ರ ನ್ಯೂಸ್: ಮೆಟಾ (Meta) ಮಾಲೀಕತ್ವದ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಗಳನ್ನು ಪರಿಚಯಿಸುತ್ತಲೇ ಬಂದಿದೆ. ಅತ್ಯಂತ ಸುಲಭವಾಗಿ ಕಾರ್ಯನಿರ್ವಹಿಸುವಂತಹ ಆಯ್ಕೆ ವಾಟ್ಸ್ಆ್ಯಪ್ ನೀಡುತ್ತಿದೆ. ಈ ವರ್ಷವಂತು ವಾಟ್ಸ್ಆ್ಯಪ್ ಅನೇಕ ವಿನೂತನ ಅಪ್ಡೇಟ್ಗಳನ್ನು ನೀಡಿ ಬಳಕೆದಾರರನ್ನು ಮತ್ತಷ್ಟು ಖುಷಿ ಪಡಿಸುತ್ತಿದೆ. ಇದೀಗ ವಾಟ್ಸ್ಆ್ಯಪ್ (WhatsApp) ಮತ್ತೊಂದು ಪ್ರಮುಖ ಫೀಚರ್ಸ್‌ನಲ್ಲಿ ಹೊಸ ಬದಲಾವಣೆ ತಂದಿದೆ. ಬಹುತೇಕ ಎಲ್ಲ ಬಳಕೆದಾರರು ಉಪಯೋಗಿಸುತ್ತಿರುವ ಡಿಲೀಟ್ ಫಾರ್ ಎವರಿಒನ್ ಫೀಚರ್ನಲ್ಲಿ ಹೊಸ ಅಪ್ಡೇಟ್ ಒಂದನ್ನು ನೀಡಲಾಗಿದೆ. ಇದೀಗ ನೀವು ವಾಟ್ಸ್ಆ್ಯಪ್ನಲ್ಲಿ ಯಾರಿಗಾದರು ಮಾಡಿದ ಮೆಸೇಜ್ (Message) ಅನ್ನು ಅವರಿಗೆ ಕಾಣದಂತೆ ಡಿಲೀಟ್ ಮಾಡಲು ಹೆಚ್ಚಿನ ಕಾಲವಕಾಶ ನೀಡಲಾಗಿದೆ.
ಪ್ರಸ್ತುತ ವಾಟ್ಸ್ಆ್ಯಪ್ ಬಳಕೆದಾರರು ಡಿಲೀಟ್ ಫಾರ್ ಎವರಿಒನ್ ಫೀಚರ್ನಲ್ಲಿ ತಾವು ಸೆಂಡ್ ಮಾಡಿದ ಸಂದೇಶವನ್ನು ಹಂಚಿಕೊಂಡ ಸಮಯದಿಂದ ಒಂದು ಗಂಟೆ ಎಂಟು ನಿಮಿಷಗಳು ಮತ್ತು 16 ಸೆಕೆಂಡುಗಳ ಅವಧಿಯಲ್ಲಿ ಡಿಲೀಟ್ ಮಾಡಬಹುದು. ಆ ಸಮಯದ ಬಳಿಕ ಡಿಲೀಟ್ ಫಾರ್ ಎವರಿಒನ್ ಆಯ್ಕೆ ಕಾಣಿಸುವುದಿಲ್ಲ. ಇದೀಗ ಇದರ ಟೈಂ ಲಿಮಿಟ್ ಅನ್ನು ಹೆಚ್ಚಿಸಲಾಗಿದೆ.
ಮೆಟಾ ಒಡೆತನದ ಕಂಪನಿ ಇದೀಗ ಈ ಸಮಯವನ್ನು ಬರೋಬ್ಬರಿ ಎರಡು ದಿನಗಳಿಗೆ ವಿಸ್ತರಣೆ ಮಾಡಿದೆ. ಇದರಿಂದ ನೀವು ಸಂದೇಶವನ್ನು ಕಳುಹಿಸಿದ ಎರಡು ದಿನಗಳ ನಂತರ ಡಿಲೀಟ್ ಫಾರ್ ಎವರಿಒನ್ ಬಳಸಿ ಡಿಲೀಟ್ ಮಾಡಬಹುದಾಗಿದೆ. ಈ ಫೀಚರ್ಸ್ ಒಂದು ಗಂಟೆ, ಎಂಟು ನಿಮಿಷಗಳು ಮತ್ತು 16 ಸೆಕೆಂಡುಗಳಿಂದ ಎರಡು ದಿನಗಳು ಮತ್ತು 12 ಗಂಟೆಗಳವರೆಗೆ ಹೆಚ್ಚಿಸಲಾಗಿದೆ. ಈ ಹೊಸ ಅಪ್ಡೇಟ್ ಬಗ್ಗೆ ವಾಟ್ಸ್ಆ್ಯಪ್ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಇದರ ಜೊತೆಗೆ ಯಾರಿಗೂ ತಿಳಿಯದಂತೆ ಗ್ರೂಪ್ನಿಂದ ಹಿಂದೆ ಸರಿಯಬಹುದಾದ ಆಯ್ಕೆ ನೀಡಲಾಗಿದೆ. ಈ ಹಿಂದೆ ಒಬ್ಬರು ಗ್ರೂಪ್ನಿಂದ ಎಕ್ಸಿಟ್ ಆದರೆ ಎಲ್ಲರಿಗೂ ಆ ನೋಟಿಫಿಕೇಶನ್ ಕಾಣುತ್ತಿತ್ತು. ಈಗ ನೀವು ಗ್ರೂಪ್ನಿಂದ ಹಿಂದೆ ಸರಿದರೆ ಆ ನೋಟಿಫಿಕೇಶನ್ ಕೇವಲ ಅಡ್ಮಿನ್ಗೆ ಮಾತ್ರ ಕಾಣುತ್ತದೆ. ಇನ್ನು ವಾಟ್ಸ್ಆ್ಯಪ್ನಲ್ಲಿ ವ್ಯೂವ್ ಒನ್ಸ್ ಫೀಚರ್ ನಲ್ಲಿ ಸ್ಕ್ರೀನ್ ಶಾಟ್ ತೆಗೆಯುವ ಆಯ್ಕೆಯನ್ನು ನಿರ್ಬಂಧಿಸಿದೆ. ಹಾಗೆಯೆ ಆಯ್ದ ಜನರಿಗೆ ನೀವು ಆನ್ಲೈನ್ನಲ್ಲಿದ್ದರೂ ಆಫ್ಲೈನ್ ಇರುವಂತೆ ಮಾಡುವ ಆಯ್ಕೆ ನೀಡಲಾಗಿದೆ.
ವಾಟ್ಸ್ಆ್ಯಪ್ ಸೇರಲಿದೆ ಲಾಗಿನ್ ಫೀಚರ್:
ವಾಟ್ಸ್ಆ್ಯಪ್ ಮತ್ತೊಂದು ನೂತನ ಫೀಚರ್ ಅನ್ನು ತರುವ ಬಗ್ಗೆ ಸುದ್ದಿ ಹೊರಬಿದ್ದಿದೆ. ಅದುವೇ ಲಾಗಿನ್ ಆಯ್ಕೆ. ಹಿಂದಿನಿಂದಲೂ ವಾಟ್ಸ್ಆ್ಯಪ್ ತನ್ನ ಬಳಕೆದಾರರ ಪ್ರೈವಸಿ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ. ಎಂಡ್–ಟು–ಎನ್ಕ್ರಿಪ್ಷನ್ ಆಯ್ಕೆ ಜೊತೆಗೆ ಫಿಂಗರ್ ಪ್ರಿಂಟ್ ಪ್ರೈವಸಿಯನ್ನು ನೀಡಿದೆ. ಇದರ ಜೊತೆಗೆ ಹೊಸ ಲಾಗಿನ್ ಫೀಚರ್ ತರಲು ಮುಂದಾಗಿದೆ. ಇದು ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ನಲ್ಲಿರುವ ಲಾಗಿನ್ ಅನುಮೋದನೆ ಫೀಚರ್ ಮಾದರಿಯಲ್ಲಿ ಇರಲಿದೆ ಎನ್ನಲಾಗಿದೆ. ವಾಟ್ಸ್ಆ್ಯಪ್ ಬೇಟಾ ಇನ್ಫೋ ಈ ಬಗ್ಗೆ ವರದಿ ಮಾಡಿದೆ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ, ನೀವು ಹೊಸ ಡಿವೈಸ್‌ನಲ್ಲಿ ವಾಟ್ಸ್ಆ್ಯಪ್ ಖಾತೆಗೆ ಲಾಗಿನ್ ಮಾಡಿದರೆ ನಿಮಗೆ ವಾಟ್ಸ್ಆ್ಯಪ್ನಿಂದ ನೋಟಿಫಿಕೇಶನ್ ಬರಲಿದೆ. ಈ ನೋಟಿಫಿಕೇಶನ್‌ನಲ್ಲಿ ಲಾಗಿನ್ ಆಗುತ್ತಿರುವುದು ನೀವೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಲು ನಿಮ್ಮನ್ನು ಕೇಳುತ್ತದೆ. ಅದನ್ನು ನೀವು ಓಕೆ ಮಾಡಿದರೆ ಮಾತ್ರ ವಾಟ್ಸ್ಆ್ಯಪ್ ಲಾಗಿನ್ ಆಗುತ್ತದೆ. ಅಲ್ಲದೆ ಒಂದು ವೇಳೆ ನೀವು 6-ಅಂಕಿಯ ವೆರಿಫಿಕೇಶನ್ ಕೋಡ್ ಅನ್ನು ತಪ್ಪಾಗಿ ಶೇರ್ ಮಾಡಿದರೂ ಕೂಡ ನಿಮ್ಮ ಲಾಗ್ ಇನ್ ಪ್ರಯತ್ನ ವಿಫಲವಾಗಲಿದೆ.