ನಾಗಮಂಗಲ:ಮೇ.22: ಕೊರೊನಾ ಎಷ್ಟೊಂದು ಭೀಕರತೆ ಪ್ರದರ್ಶನ ಮಾಡುತ್ತಿದೆ ಎನ್ನುವುದಕ್ಕೆ ಮಂಡ್ಯ ಜಿಲ್ಲೆಯ ಘಟನೆಯೇ ಸಾಕ್ಷಿ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಬಿಂಡಿಗನವಿಲೆ ಹೋಬಳಿಯ ಬೊಮ್ಮೇನಹಳ್ಳಿ ಗ್ರಾಮದ ಯುವ ಉದ್ಯಮಿ ಕಿರಣ್ ಕೊರೊನಾ ಸೋಂಕಿನಿಂದ ಮೃತರಾಗಿದ್ದರು. ಬೆಳ್ಳೂರು ಕ್ರಾಸ್ ನಲ್ಲಿರುವ ದಿ ಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ದಾಖಲು ಆಗಿ ಚಿಕಿತ್ಸೆ ಪಡೆಯುತ್ತಿದ್ದ ಕಿರಣ್ ನನ್ನು ಕಳೆದ ಮೂರು ದಿನಗಳ ಹಿಂದಷ್ಟೇ ಬೆಂಗಳೂರಿಗೆ ಕಳುಹಿಸಲಾಗಿತ್ತು. ಆದರೆ ಅಷ್ಟರ ವೇಳೆಗೆ ಪರಿಸ್ಥಿತಿ ಕೈಮೀರಿ ನ್ಯೂಮೋನಿಯಾಗೆ ಬದಲಾಗಿದ್ದರ ಪರಿಣಾಮ ಶನಿವಾರ ಮುಂಜಾನೆ ಕಿರಣ್ ಇಹಲೋಕ ತ್ಯಜಿಸಿದ್ದರು. ಹುಟ್ಟೂರಾದ ಬೊಮ್ಮೇನಹಳ್ಳಿಯ ತೋಟದಲ್ಲಿ ಅಂತ್ಯಕ್ರಿಯೆ ಮಾಡಲಾಯ್ತು.
ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ್ಳೂರು ಕ್ರಾಸ್ ಟೋಲ್ ಬಳಿ “ ಬಕಾಸುರ “ ಹೆಸರಿನ ಹೋಟೆಲ್ ಆರಂಭಿಸಿದ್ದರು. ಬಳಿಕ ಕಳೆದ 11 ತಿಂಗಳ ಹಿಂದೆ ಅಂದರೆ ಕೊರೊನಾ ಮೊದಲನೆ ಅಲೆ ಸಮಯದಲ್ಲೇ ತುಂಬಾ ಸರಳವಾಗಿ ಪೂಜಾ ಎಂಬಾಕೆಯನ್ನು ವರಿಸಿದ್ದರು. ಆ ಬಳಿಕ ಕೊರೊನಾ ಹೊಡೆತದಿಂದ ಹೋಟೆಲ್ ಉದ್ಯಮಕ್ಕೆ ಬ್ರೇಕ್ ಬಿದ್ದಿತ್ತು. ಊರಿನಲ್ಲೇ ತೋಟದ ಕೆಲಸ ಮಾಡಿಕೊಂಡು ಸಂಸಾರ ಸಾಗರ ಈಜುವಾಗ ಕೊರೊನಾ ಎಂಬಾ ಬಿರುಗಾಳಿ ಎಲ್ಲವನ್ನೂ ಸ್ವಾಹಃ ಮಾಡಿಬಿಟ್ಟಿದೆ. ಬಾಳಿ ಬದುಕು ಕಟ್ಟಿಕೊಳ್ಳುವ ಕನಸು ಕಟ್ಟಿಕೊಂಡಿದ್ದ ಯುವಕ ಕಿರಣ್ ಕೊರೊನಾದಿಂದ ಸಾವಿನ ಮನೆ ಸೇರಿದ್ದಾರೆ. ಇಂದು ಹುಟ್ಟೂರು ಬೊಮ್ಮನಹಳ್ಳಿಯ ತೋಟದಲ್ಲಿ ಲೀನವಾಗಿದ್ದಾರೆ.
ಮೃತ ಕಿರಣ್ ಪತ್ನಿ ಪೂಜಾ ಕೂಡ ಗಂಡನಷ್ಟೇ ತುಂಬಾ ಚುರುಕು ಸ್ವಭಾವದ ಹುಡುಗಿ. ಎಲ್ಲಾ ಹುಡುಗರಂತೆ ತಾನೂ ಕೂಡ ಬುಲೆಟ್ ಸವಾರಿ ಮಾಡುತ್ತಿದ್ದ ಕೆಚ್ಚೆದೆಯ ಹುಡುಗಿ. ಗಂಡನ ಎಲ್ಲಾ ಕೆಲಸಗಳಿಗೂ ಬೆನ್ನೆಲುಬಾಗಿದ್ದ ಪೂಜಾ ಗಂಡನ ಸಾವನ್ನು ಸಹಿಸಲಾಗದೆ ಸಾವಿನ ಹಾದಿ ಹಿಡಿದಿದ್ದಾಳೆ. ಗಂಡನ ಶವಕ್ಕೆ ತೋಟದಲ್ಲಿ ಅಗ್ನಿಸ್ಪರ್ಶ ಆಗುತ್ತಿದ್ದ ಹಾಗೆ ಮನೆಗೆ ಬಂದ ಕೆಲವೇ ನಿಮಿಷಗಳಲ್ಲಿ ನೇಣಿಗೆ ಕೊರಳು ಒಡ್ಡಿದ್ದಾಳೆ. ಈ ಮೂಲಕ ಗಂಡನ ಸಾವನ್ನೇ ಹಿಂಬಾಲಿಸುವ ಮೂಲಕ ಸತಿಸಹಗಮನ ಪದ್ಧತಿಯನ್ನು ನೆನಪು ಮಾಡಿಕೊಳ್ಳುವಂತೆ ಪೂಜಾ ಮಾಡಿದ್ದು, ಇಡೀ ಕುಟುಂಬವೇ ದುಃಖದಲ್ಲಿ ಮುಳುಗುವಂತೆ ಮಾಡಿದೆ.
ವರದಿ: ಪಬ್ಲಿಕ್ ಸ್ಪಾಟ್