ಮುಂಬೈ: ಕಿಕ್-ಸ್ಟಾರ್ಟಿಂಗ್ ಜೀಪ್ ತಯಾರಿಸಿದ ಬಡ ಪ್ರತಿಭೆಗೆ ಆನಂದ್ ಮಹೀಂದ್ರಾ ಬೊಲೆರೋ ಗಿಫ್ಟ್ ನೀಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.
ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ತಯಾರಿಸಿದ ಕಿಕ್-ಸ್ಟಾರ್ಟಿಂಗ್ ಜೀಪ್‍ನ ವೀಡಿಯೋ ಹಂಚಿಕೊಂಡು, ಅವರಿಗೆ ಬೊಲೆರೋ ಕಾರು ಗಿಫ್ಟ್ ನೀಡುವುದಾಗಿ ಭರವಸೆ ನೀಡಿದ್ದ ಆನಂದ್ ಮಹೀಂದ್ರಾ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
ಮಹಾರಾಷ್ಟ್ರ ಮೂಲದ ದತ್ತಾತ್ರೇಯ ಲೋಹರ್ ಹಳೆಯ ವಾಹನದ ಬಿಡಿ ಭಾಗಗಳನ್ನ ಬಳಸಿ, ದ್ವಿ-ಚಕ್ರ ವಾಹನ ಸಿದ್ಧಪಡಿಸಿದ್ದರು. ಇದಕ್ಕಾಗಿ 60 ಸಾವಿರ ರೂ. ಖರ್ಚು ಮಾಡಿದ್ದರು. ಇದರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
“ನಮ್ಮ ಜನರ ಜಾಣ್ಮೆ ಮತ್ತು ಕನಿಷ್ಠ ಸಂಪನ್ಮೂಲಗಳನ್ನು ಬಳಸಿಕೊಂಡಿರುವ ಈ ಕ್ರೀಯಾಶೀಲತೆಯನ್ನು ನಾನು ಪ್ರಶಂಸಿಸುತ್ತೇನೆ. ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತೇನೆ” ಎಂದು ಮಹೀಂದ್ರಾ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಹಳೆಯ ವಾಹನದ ಬದಲಾಗಿ ಬೊಲೆರೋ ಕಾರನ್ನು ಗಿಫ್ಟ್ ಆಗಿ ನೀಡುವುದಾಗಿ ತಿಳಿಸಿದ್ದರು. ಇದೀಗ ಕೊಟ್ಟ ಮಾತಿನಂತೆ ದತ್ತಾತ್ರೇಯ ಅವರಿಗೆ ಹೊಸ ಕಾರು ನೀಡಿದ್ದಾರೆ.
ಪ್ರತಿಭೆಗಳಿಗೆ ಕೊರತೆ ಇಲ್ಲ, ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ತೋರಿರುವ ಅನೇಕ ನಿದರ್ಶನಗಳಿವೆ. ಗ್ರಾಮೀಣ ಪ್ರದೇಶಗಳಲ್ಲೂ ಅನೇಕರು ಎಲೆಮರೆಕಾಯಿಯಂತೆ ವಿಭಿನ್ನ ರೀತಿಯ ಅನ್ವೇಷಣೆ ಮಾಡುತ್ತಿರುತ್ತಾರೆ. ಬಡ ಪ್ರತಿಭೆಗೆ ಇದೀಗ ಮಹೀಂದ್ರಾ ಕಂಪನಿ ಎಂಡಿ ಆನಂದ್ ಮಹೀಂದ್ರಾ ಬೊಲೆರೋ ಕಾರು ಗಿಫ್ಟ್ ನೀಡುವ ಮೂಲಕ ಪ್ರತಿಭೆಯನ್ನು ಪ್ರೋತ್ಸಾಹಿಸಿದ್ದಾರೆ.