ಸುಳ್ಯ: ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆಯ ಪುರ್ಲುಮಕ್ಕಿ ಎಂಬಲ್ಲಿ ಕಳೆದ ವಾರ ಹಣ್ಣು ಅಡಿಕೆ ಕದ್ದಿದ್ದಾನೆ ಎಂಬ ಆರೋಪದಲ್ಲಿ ಬಾಲಕನಿಗೆ ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹಲ್ಲೆಗೊಳಗಾದ ಬಾಲಕ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದು ಹಲ್ಲೆ ನಡೆಸಿದ 10 ಮಂದಿ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಗುತ್ತಿಗಾರಿನ 16 ವರ್ಷದ ಬಾಲಕನಿಗೆ ಅಡಿಕೆ ಕದ್ದ ಆರೋಪದಲ್ಲಿ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಮಾತ್ರವಲ್ಲದೆ ಹಲ್ಲೆ ನಡೆಸಿದ ವಿಡಿಯೋ ಕೂಡ ಗ್ರೂಪ್‌ಗಳಲ್ಲಿ ಹರಿಯಬಿಡಲಾಗಿದೆ. ಇದರ ಆಧಾರದಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ಈ ಕುರಿತು ವಳಲಂಬೆ ಪರಿಸರದ ಜೀವನ್, ವರ್ಷಿತ್, ಸಚಿನ್, ಮೋಕ್ಷಿತ್, ಸನತ್, ಮುರಳಿ, ದಿನೇಶ್, ಈಶ್ವರ್, ಚಂದ್ರ, ಚೇತನ್ ಎಂಬವರ ಮೇಲೆ ಎಫ್ ಐ ಆರ್ ದಾಖಲಾಗಿರುವುದಾಗಿ ತಿಳಿದುಬಂದಿದೆ. ವಿಡಿಯೋ ವೈರಲ್ ಆಗಿ ಪ್ರಕರಣ ದಾಖಲಾಗುತ್ತಿದ್ದಂತೇ ಹಲ್ಲೆ ನಡೆಸಿದವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.