Ad Widget .

ಅಸ್ಪರ್ಶ ಹುಡುಗ ಅಸಾಮಾನ್ಯನಾದ ಕಥೆ. ಈ‌ ಭೀಮ‌ ಸಂವಿಧಾನದ ಬಲಭೀಮ

ಬಾಬಾಸಾಹೇಬ್ ಅಂಬೇಡ್ಕರ್ ಎಂದೇ ಜನಪ್ರಿಯರಾಗಿರುವ ಡಾ. ಭೀಮ್ ರಾವ್ ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ರಚಿಸಿ, ಭಾರತಕ್ಕೆ ಒಂದು ದೊಡ್ಡ ಕೊಡುಗೆಯನ್ನೇ ನೀಡಿದ ಪ್ರಸಿದ್ಧ ನಾಯಕರು.
ಆದರೆ ಎಲ್ಲವನ್ನೂ ಗೆದ್ದು ನಿಂತಿದ್ದರಿಂದಲೇ ಇವತ್ತು ದೇಶ ಮರೆಯಲಾರದ ಚೇತನವಾಗಿ, ಸಂವಿಧಾನ ಶಿಲ್ಪಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ನಿಲ್ಲುವಂತಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಜನಿಸಿದ್ದು ೧೮೯೧ರ ಏಪ್ರಿಲ್ ೧೪ರಂದು ಮಹರ್ ಎಂಬ ದಲಿತ ಜನಾಂಗದಲ್ಲಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡೆ ಗ್ರಾಮದಲ್ಲಿ ಸುಭೇದಾರ್ ರಾಮ್‌ಜೀ ಸಕ್ಬಾಲ್, ತಾಯಿ ಶ್ರೀಮತಿ ಭೀಮಾಬಾಯಿರವರ ಪುತ್ರರಾಗಿ ಜನಿಸಿದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .
ambedkar family


ಅವರು ದಲಿತರ ಮತ್ತು ಇತರ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಪ್ರಸಿದ್ಧ ಮುತ್ಸದ್ಧಿ. ೧೮೯೧ ರ ಏಪ್ರಿಲ್ ೧೪ ರಂದು ಜನಿಸಿದ ಅಂಬೇಡ್ಕರ್ ಅವರ ಸುಧಾರಣೆಗಳು ಹಾಗೂ ಸಮಾಜ ಸೇವೆಗಳು ದೇಶಾದ್ಯಂತ ಅಂಬೇಡ್ಕರ್ ಜಯಂತಿ ರೂಪದಲ್ಲಿ ಪ್ರತಿಧ್ವನಿಸುತ್ತಿವೆ.
ಅವತ್ತು ಆ ಹುಡುಗ ಅಸ್ಪೃಶ್ಯತೆಯನ್ನು, ಬಡತನವನ್ನು ಮೆಟ್ಟಿ ನಿಂತು, ವಿದ್ಯಾಭ್ಯಾಸ ಮಾಡದೆ ಹೋಗಿದ್ದರೆ ಇವತ್ತು ಈ ಅಖಂಡ ಭಾರತ ಮರೆಯಲಾರದ ಚೇತನವೊಂದು ಸೃಷ್ಟಿಯಾಗುತ್ತಿರಲಿಲ್ಲವೇನೋ? ಇವತ್ತು ಡಾ. ಬಿ.ಆರ್. ಅಂಬೇಡ್ಕರ್ ಎಂಬ ಹೆಸರು ಹೇಳುತ್ತಿದ್ದಂತೆಯೇ ಮೈರೋಮಾಂಚನಗೊಳ್ಳುತ್ತದೆ.
ಭೀಮರಾವ್ ರಾಮಜಿ ಅಂಬೇಡ್ಕರ್‌ರವರು ಬಾಲ್ಯದಲ್ಲಿ ಅನುಭವಿಸಿದ ಆ ನೋವು ಒಂದೇ ಎರಡೇ? ಅದನ್ನು ಹೇಳುತ್ತಾ ಹೋದರೆ ನಿಜಕ್ಕೂ ಮನಸ್ಸಿಗೆ ನೋವಾಗುತ್ತದೆ. ಇಷ್ಟೊಂದು ನೋವನ್ನು ಅವರು ಅನುಭವಿಸಿದ್ದರಾ? ಎಂಬ ಸಂಕಟ ಎದೆಯಲ್ಲಿ ಢವಗುಟ್ಟುತ್ತದೆ.
ಆಗಿನ್ನೂ ಅಂಬೇಡ್ಕರ್‌ರವರಿಗೆ ಏಳೆಂಟು ವರ್ಷದ ಪ್ರಾಯ. ಒಂದು ದಿನ ಆ ಪುಟ್ಟ ಹುಡುಗ ತನ್ನ ತಂದೆಯನ್ನು ನೋಡಲು ಎತ್ತಿನ ಗಾಡಿಯಲ್ಲಿ ಕುಳಿತು ಸಾಗುತ್ತಿದ್ದ. ಗಾಡಿ ಸ್ವಲ್ಪ ದೂರ ಹೋಗಿರಬೇಕಷ್ಟೆ. ಗಾಡಿಯವನಿಗೆ ಆ ಹುಡುಗ ದಲಿತ ಎಂಬುದು ತಿಳಿಯಿತು. ಆ ಕೂಡಲೇ ಗಾಡಿಯನ್ನು ನಿಲ್ಲಿಸಿ ಆ ಪುಟ್ಟ ಹುಡುಗನನ್ನು ಕೆಳಕ್ಕೆ ತಳ್ಳಿ ಹಾಕಿ ಮುನ್ನಡೆದ. ಆ ಪುಟ್ಟ ಹುಡುಗನ ಮನಸ್ಸು ಹೇಗಾಗಿರಬಹುದು?
ಇನ್ನೊಮ್ಮೆ ಕೆರೆಯಲ್ಲಿ ನೀರು ಕುಡಿದ ಎಂಬ ಕಾರಣಕ್ಕೆ ಗ್ರಾಮಸ್ಥರೆಲ್ಲಾ ಸೇರಿ ಥಳಿಸಿದರು. ಆಕಸ್ಮಿಕವಾಗಿ ಮಳೆ ಬಂದಿದ್ದರಿಂದ ರಸ್ತೆ ಬದಿಯಲ್ಲಿದ್ದ ಮನೆಯೊಂದರ ಜಗಲಿಯ ಮೇಲೆ ನಿಂತಿದ್ದಕ್ಕೆ ಮನೆಯ ಯಜಮಾನಿ ಕೋಪದಿಂದ ಜಗಲಿಯಿಂದ ತಳ್ಳಿ ಹಾಕಿದ್ದಳು. ಕ್ಷೌರಿಕ ಕೂದಲನ್ನು ಮುಟ್ಟದೆ ಹಿಂದಕ್ಕೆ ಕಳುಹಿಸಿದ್ದನು. ಹೀಗೆ ಒಂದೇ ಎರಡೇ? ನೂರಾರು ಅವಮಾನ, ಹಿಂಸೆ ಆ ಹುಡುಗನನ್ನು ಇನ್ನಿಲ್ಲದಂತೆ ಕಾಡಿತ್ತು. ನಾವು ಮನುಷ್ಯರೆ, ಹಿಂದುಳಿದ ಜನಾಂಗದಲ್ಲಿ ಹುಟ್ಟಿದ್ದೇ ತಪ್ಪಾಯಿತಾ? ಎಂಬ ಭಾವನೆ ಅವತ್ತು ಆ ಹುಡುಗನನ್ನು ಕಾಡಿತ್ತು. ಅದಕ್ಕೆಲ್ಲಾ ಹೆದರಿ ಆ ಹುಡುಗ ಮುದುರಿ ಕೂತಿದ್ದರೆ ಇವತ್ತು ಜಗತ್ತೇ ಹೆಮ್ಮೆಯಿಂದ ಕೊಂಡಾಡುವ ಚೇತನವೊಂದು ನಮ್ಮ ಮುಂದೆ ಇರುತ್ತಿರಲಿಲ್ಲ.
ಅವತ್ತಿನ ದಿನದಲ್ಲಿ ಕೆಳಜಾತಿಯ ಹುಡುಗನೊಬ್ಬ ಶಾಲೆಗೆ ಹೋಗಿ ಅಕ್ಷರ ಕಲಿಯುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ ಅಂಬೇಡ್ಕರರಿಗೆ ಚಿಕ್ಕಂದಿನಿಂದಲೇ ಓದಬೇಕು ಏನನ್ನಾದರೂ ಸಾಧಿಸಬೇಕು ಎಂಬ ಛಲ ಇತ್ತು. ಇದಕ್ಕೆ ಹೆತ್ತವರು ನೀರೆರೆದು ಪೋಷಿಸಿದರು. ಇದರ ಜೊತೆಗೆ ಸಂಸ್ಕೃತ ಕಲಿಯಬೇಕೆಂಬ ಮಹದಾಸೆಯಿತ್ತು. ಆದರೆ ಇದಕ್ಕೆ ಕೀಳ್ಜಾತಿಯವರು ಇದನ್ನು ಓದಬಾರದೆಂದು ಮೇಲ್ಜಾತಿಯವರು ಅಡ್ಡಿಪಡಿಸಿದರು. ಆದರೆ ಇವರು ಬಗ್ಗಲಿಲ್ಲ ಬದಲಿಗೆ ಹಠತೊಟ್ಟವರಂತೆ ಸಂಸ್ಕೃತ ಕಲಿತು, ಅದರಲ್ಲಿ ಸಂಪೂರ್ಣ ಪಾಂಡಿತ್ಯಗಳಿಸಿ, ತಾವೇ ಹಲವಾರು ವಿಚಾರ ಕ್ರಾಂತಿ ಕೃತಿಗಳನ್ನು ರಚಿಸುವುದರ ಮೂಲಕ ಆಧುನಿಕ ಮನು ಎಂಬ ಕೀರ್ತಿಗೆ ಪಾತ್ರರಾದರು. ಇದನ್ನು ಮಾತ್ರ ಯಾರಿಂದಲೂ ತಡೆಯಲು ಸಾಧ್ಯವಾಗಲೇ ಇಲ್ಲ. ಏಕೆಂದರೆ ಹಠವಾದಿ ಅಂಬೇಡ್ಕರರ ಭೀಮಶಕ್ತಿ ಅಂಥಾದ್ದು! ೧೯೦೭ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಂಬೇಡ್ಕರರಿಗೆ ಆ ವರ್ಷವೇ ರಮಾಬಾಯಿಯೊಂದಿಗೆ ವಿವಾಹವಾಯಿತು.

Ad Widget . Ad Widget . Ad Widget .


ಆ ನಂತರ ಅವರು ಮುಂಬೈನ ಎಲ್ಫಿನ್‌ಸ್ಟನ್ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್ ಮುಗಿಸಿ ೧೯೨೧ ರಲ್ಲಿ ಬಿ.ಎ. ಪದವೀಧರರಾದರು. ನಂತರ ಬರೋಡ ಮಹಾರಾಜರ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು.
ಆದರೆ ಆಗ ಬರೋಡ ಮಹಾರಾಜರೇ ಇವರ ಬುದ್ಧಿಶಕ್ತಿಗೆ ಮಾರುಹೋಗಿ ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದ ನಂತರ ತಮ್ಮಲ್ಲೇ ಹತ್ತು ವರ್ಷಗಳ ಕಾಲ ಕೆಲಸ ಮಾಡಬೇಕೆಂಬ ಕರಾರಿನೊಂದಿಗೆ ಉನ್ನತ ವ್ಯಾಸಂಗಕ್ಕೆ ಇವರನ್ನು ಅಮೇರಿಕಾಕ್ಕೆ ಕಳುಹಿಸಿದರು. ಅಲ್ಲಿ ಎಂ.ಎ. ಪದವಿಯೊಡನೆ ಪಿಎಚ್‌ಡಿಯನ್ನು ಗಳಿಸಿ ೧೯೧೭ರ ಆಗಸ್ಟ್ ೨೧ರಂದು ಮತ್ತೆ ಭಾರತಕ್ಕೆ ಮರಳಿದರು. ಇಷ್ಟಾದರೂ ಅವರ ಜ್ಞಾನದಾಹ ಇಂಗಿರಲಿಲ್ಲ. ಹಾಗಾಗಿ ಪುನಃ ೧೯೨೦ರಲ್ಲಿ ಮತ್ತಷ್ಟು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನಿಗೆ ಹೋದ ಇವರು ೧೯೨೨ರಲ್ಲಿ ಬ್ಯಾರಿಸ್ಟರ್ ಎಂಬ ಪದವಿಯೊಡನೆ ಭಾರತಕ್ಕೆ ವಾಪಸ್ಸಾದರು. ವಿದೇಶದಲ್ಲಿ ಕಲಿತು, ಒಂದು ಸಾಲದು ಅಂತ ಹಲವಾರು ಡಾಕ್ಟರೇಟ್ ಪದವಿಗಳನ್ನು ಗಳಿಸಿ ಅಂಬೇಡ್ಕರ್ ಅವರು ಸ್ವದೇಶಕ್ಕೆ ಬಂದಿದ್ದರೂ, ಇಲ್ಲಿ ಮಾತ್ರ ಅದೇ ಅಸ್ಪೃಶ್ಯತೆ ಅವರನ್ನು ಅಪಮಾನಿಸುತ್ತಿತ್ತು. ಆಗ ಅಂಬೇಡ್ಕರರು ಮೂಕನಾಯಕ ಎಂಬ ಪತ್ರಿಕೆಯನ್ನು ಆರಂಭಿಸಿ ಅದರ ಮುಖೇನ ಅಸ್ಪೃಶ್ಯತೆಯ ವಿರುದ್ಧ ಜನಜಾಗೃತಿಗೆ ನಿಂತರು.
ಬಹಿಷ್ಕೃತ ಹಿತಕಾರಿಣಿ ಎಂಬ ಸಭಾದಂತಹ ಸಂಘಟನೆಗಳನ್ನು ಕಟ್ಟಿ ಅಸ್ಪೃಶ್ಯತೆಯ ವಿರುದ್ಧ ಸಮಾನತೆಗಾಗಿ ಬೀದಿಗಿಳಿದು ಹಲವು ತರನಾದ ಹೋರಾಟ ಮಾಡುತ್ತಾ ದಲಿತರ ಪಾಲಿಗೆ ಅಕ್ಷರಶಃ ತೋರುಬೆರಳಾಗಿದ್ದರು. ಇವರ ಚೌದರ್ ಕೆರೆ ಚಳವಳಿಯಂತೂ ಭಾರತದ ಇತಿಹಾಸದಲ್ಲಿ ದಾಖಲಿಸುವಂತಾದ್ದು. ಹೀಗೆ ದಲಿತರ ಪರ ಇವರ ಕ್ರಾಂತಿ ಕಹಳೆ ನಿಧಾನವಾಗಿ ದೇಶದೆಲ್ಲೆಡೆ ಮೊಳಗತೊಡಗಿತ್ತು.
ಅದೇ ಕಾಲಕ್ಕೆ ಎರಡನೇ ಮಹಾಯುದ್ದದ ಕಾಲದಲ್ಲಿ ಬ್ರಿಟಿಷರು ಕೆಲವು ಭಾರತೀಯರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡಾಗ ಅದರಲ್ಲಿ ಪ್ರಥಮ ಪ್ರಾಶಸ್ತ್ಯವೇ ಅಂಬೇಡ್ಕರವರಿಗೆ ದೊರಕಿತ್ತು. ಹಾಗೆಯೇ ಭಾರತ ಸ್ವಾತಂತ್ರ್ಯ ಗಳಿಸಿದ ನಂತರ ನೆಹರೂ ಸರ್ಕಾರದಲ್ಲಿ ಪ್ರಥಮ ಕಾನೂನು ಸಚಿವರಾಗಿದ್ದ ಹೆಗ್ಗಳಿಕೆ ಹೊಂದಿದ್ದ ಅಂಬೇಡ್ಕರರು, ಭಾರತ ದೇಶಕ್ಕೆ ಸಶಕ್ತ ಸಂವಿಧಾನ ನೀಡಿದ ಶಿಲ್ಪಿಯಾಗಿದ್ದು, ಇದು ಇಡೀ ವಿಶ್ವಕ್ಕೇ ಮಾದರಿ ಸಂವಿಧಾನವಾಗಿರುವುದು ಇವರಿಗೆ ಸಂದ ಮಹಾಗೌರವವೇ ಸರಿ. ಅಧಿಕಾರ ಇರಲಿ ಇಲ್ಲದಿರಲಿ ಅಂಬೇಡ್ಕರ್‌ರವರು ಹೆಜ್ಜೆ ಇಟ್ಟಲೆಲ್ಲಾ ಅಸ್ಪೃಶ್ಯತಾ ನಿವಾರಣೆಗಾಗಿಯೇ ಅವರ ಹೆಜ್ಜೆಗಳು ತುಡಿಯುತ್ತಿದದವು. ಅಂತೆಯೇ ದಲಿತರ ಪುರೋಭಿವೃದ್ಧಿಗಾಗಿಯೇ ಅವರ ಜೀವ ಸದಾ ಮಿಡಿಯುತ್ತಿತ್ತು. ಭಾರತ ದೇಶದಲ್ಲಿ ಅಂಬೇಡ್ಕರ್ ಎಂಬ ಕ್ರಾಂತಿ ಪುರುಷ ಜನಿಸಿದ್ದರಿಂದಲೇ ದೇಶದ ಅರ್ಧ ಭಾಗದಂತಿರುವ ಉತ್ತರ ಪ್ರದೇಶ ಕಾನ್ಷಿರಾಂರಂಥ ದಲಿತ ನಾಯಕನ ಹಿಡಿತಕ್ಕೆ ಸಿಕ್ಕಿದ್ದು. ಮಾಯಾವತಿಯಂತಹ ದಲಿತ ಮಹಿಳೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು (ಈಗ ಮಾಜಿ) ಸಾಧ್ಯವಾದದ್ದು. ಅಂಬೇಡ್ಕರರ ಇಡೀ ಜೀವನ ಅಸ್ಪೃಶ್ಯರೆನಿಸಿಕೊಂಡವರಿಗೆ ನ್ಯಾಯವನ್ನೂ ಸಮಾನತೆಯನ್ನೂ ದೊರಕಿಸಿಕೊಡುವುದಕ್ಕೆ ಮುಡಿಪಾಗಿತ್ತು.
ಇದರಲ್ಲಿ ಅವರು ಸಾಕಷ್ಟು ಯಶಸ್ಸನ್ನೂ ಸಾಧಿಸಿದ್ದರು. ಆದರೂ ಹಿಂದೂ ಧರ್ಮದ ಅಸಮಾನತೆಯಿಂದ ರೋಸಿಹೋಗಿದ್ದ ಅವರು ಬುದ್ದನ ಕಾರುಣ್ಯದಲ್ಲಿ ಆಕರ್ಷಿತರಾಗಿ ೧೯೫೬ರ ಅಕ್ಟೋಬರ್ ೧೪ರಂದು ನಾಗಪುರದಲ್ಲಿ ನಡೆದ ಬೃಹತ್ ಸಮಾರಂಭವೊಂದರಲ್ಲಿ ತಮ್ಮ ಪತ್ನಿ ಡಾ. ಶಾರದಾ ಸೇರಿದಂತೆ ತಮ್ಮ ಅಪಾರ ಅಭಿಮಾನಿಗಳೊಡನೆ ಬೌದ್ಧಧರ್ಮಕ್ಕೆ ಸೇರಿದರು.
೧೯೫೬ರ ಡಿಸೆಂಬರ್ ೬ರಂದು ಇಡೀ ದೇಶವನ್ನು ಅನಾಥವಾಗಿಸಿ ಕಾಣದ ಊರಿನತ್ತ ಪಯಣಿಸಿದ ಅಂಬೇಡ್ಕರರಿಗೆ ಮರಣೋತ್ತರವಾಗಿ ಭಾರತ ಸರ್ಕಾರವು ೧೯೯೧ರಲ್ಲಿ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. ಅಂಬೇಡ್ಕರ್ ಇವತ್ತು ನಮ್ಮ ಮುಂದೆ ಇಲ್ಲದಿರಬಹುದು ಆದರೆ ಅವರು ತಾವು ಮಾಡಿದ ಮಹತ್ ಸಾಧನೆಯಿಂದ ನೆನಪಾಗುತ್ತಲೇ ಇರುತ್ತಾರೆ.

ಬಾಬಾಸಾಹೇಬ್ ಅಂಬೇಡ್ಕರ್‌ರ ಸ್ಪೂರ್ತಿದಾಯಕ ಉಲ್ಲೇಖಗಳು:
೧. “ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು”.
೨. “ವಿದ್ಯಾವಂತರಾಗಿರಿ, ಸಂಘಟಿತರಾಗಿರಿ ಮತ್ತು ಉತ್ತೇಜಿತರಾಗಿರಿ”. ೩. “ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸುವ ಧರ್ಮವನ್ನು ನಾನು ಇಷ್ಟಪಡುತ್ತೇನೆ”.
೪. “ಜೀವನವು ದೀರ್ಘವಾಗಿರುವುದಕ್ಕಿಂತ ಉತ್ತಮವಾಗಿರಬೇಕು”.
೫. “ಸಂವಿಧಾನವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ನನ್ನ ಅರಿವಿಗೆ ಬಂದರೆ, ಅದನ್ನು ಸುಡುವ ಮೊದಲ ವ್ಯಕ್ತಿ ನಾನಾಗಿರುತ್ತೇನೆ”. ೬. “ಮನಸ್ಸಿನ ಅಭಿವೃದ್ಧಿ, ಮಾನವ ಜನಾಂಗದ ಅಂತಿಮ ಗುರಿಯಾಗಿರಬೇಕು”. ೭. “ನೀವು ಗೌರವಾನ್ವಿತ ಬದುಕನ್ನು ಬದುಕಬೇಕಾದರೆ ಸ್ವ ಸಹಾಯ ಜೀವನಶೈಲಿಯನ್ನು ಪಾಲಿಸಲೇಬೇಕು. ಇದೇ ಸರಿಯಾದ ಜೀವನಶೈಲಿ”.
೮. “ನಮ್ಮ ಹಕ್ಕಿಗಾಗಿ ನಾವೇ ಹೋರಾಡಬೇಕು. ಬೇರೆಯವರ ಸಹಾಯವಿಲ್ಲದೇ ಇರಬೇಕು. ಹೀಗೆ ನಿಮ್ಮನ್ನು ನೀವೇ ಉತ್ತೇಜಿಸಿ ಸಂಘಟಿತರಾಗಿ ಇರಬೇಕು. ಹೋರಾಟವಿಲ್ಲದೇ ಅಧಿಕಾರ ಮತ್ತು ಪ್ರತಿಷ್ಟೆ ನಿಮ್ಮ ಬಳಿ ಬಾರದು”.
೯. “ಭಾರತದ ಇತಿಹಾಸ ಎಂದರೆ ಬ್ರಾಹ್ಮಣತ್ವ ಮತ್ತು ಬೌದ್ಧ ಮತದ ನಡುವಿನ ಮಾರಣಾಂತಿಕ ಎನ್ನಬಹುದಾದ ಸಂಘರ್ಷವಾಗಿದೆ”.
೧೦. “ನನ್ನ ಪ್ರಕಾರ ಒಂದು ಸಮುದಾಯದ ಅಭಿವೃಧ್ಧಿಯನ್ನು ಅಳೆಯಬೇಕಾದರೆ ಆ ಸಮುದಾಯದ ಮಹಿಳೆಯರ ಅಭಿವೃದ್ಧಿಯೇ ಪ್ರಮುಖ ದಾರಿದೀಪವಾಗಿದೆ”.
೧೧. “ಪುರುಷರು ಒಂದು ರೀತಿಯ ವೈರ ಮನೋಭಾವದವರು. ಅವರ ಆಲೋಚನೆಗಳೂ ಇದೇ ರೀತಿಯದ್ದಾಗಿದೆ. ಒಂದು ಕಲ್ಪನೆಗೆ ಅಥವಾ ಯೋಚನೆಗೆ ಅದರ ಹಿಂದಿನ ಯೋಜನೆ ಎಷ್ಟು ಮುಖ್ಯವೋ ಆ ಯೋಚನೆಯ ಪ್ರಸರಣವೂ ಅಷ್ಟೇ ಮುಖ್ಯ. ಇಲ್ಲದಿದ್ದರೆ ಆ ಯೋಚನೆಗೆ ಸಾವು ಖಂಡಿತ”.
೧೨. “ಮಿಲ್ ನ ಸಿದ್ಧಾಂತವಾದ ಒಂದು ರಾಷ್ಟ್ರವು ಇನ್ನೊಂದು ರಾಷ್ಟ್ರವನ್ನು ಆಳಲು ಸಮರ್ಥವಲ್ಲ ಎಂಬ ಮಾತನ್ನು ಯಾರು ನಂಬುತ್ತಾರೋ ಅವರು ಒಂದುವರ್ಗವು ಇನ್ನೊಂದು ವರ್ಗವನ್ನು ಆಳಲು ಸಮರ್ಥವಲ್ಲ ಎಂಬ ಮಾತನ್ನೂ ನಂಬಲೇಬೇಕು”.
೧೩. “ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧ, ಆತ್ಮೀಯ ಗೆಳೆಯರ ಸಂಬಂಧದ ರೀತಿಯಲ್ಲಿ ಇರಬೇಕು”.
೧೪. “ಸಾಮಾಜಿಕ ದಬ್ಬಾಳಿಕೆ ರಾಜಕೀಯ ದಬ್ಬಾಳಿಕೆಗಿಂತಲೂ ಕೆಟ್ಟದಾಗಿದೆ. ಸಮಾಜ ಸುಧಾರಣೆ ಮಾಡಲು ಹೊರಟ ವ್ಯಕ್ತಿ ರಾಜಕೀಯ ಸುಧಾರಣೆ ಮಾಡಿ ಸರಕಾರ ನಡೆಸುವವನಿಗಿಂತಲೂ ಹೆಚ್ಚಿನ ಧೈರ್ಯಶಾಲಿಯಾಗಿರುತ್ತಾನೆ”.
೧೫. “ಒಬ್ಬ ಶ್ರೇಷ್ಠ ವ್ಯಕ್ತಿ ಒಬ್ಬ ಮುತ್ಸದ್ಧಿಗಿಂತಲೂ ದೊಡ್ಡವನು ಯಾಕೆಂದರೆ ಶ್ರೇಷ್ಠ ವ್ಯಕ್ತಿ ಸಮಾಜದ ಸೇವಕನಾಗಿರಲೂ ಸಿದ್ಧನಾಗಿರುತ್ತಾನೆ”.
೧೬. “ರಾಜಕೀಯ ಎಂಬ ದೇಹಕ್ಕೆ ಕಾನೂನು ಮತ್ತು ಸುವ್ಯವಸ್ಥೆಗಳೇ ಔಷಧಿಗಳಾಗಿವೆ. ರಾಜಕೀಯಕ್ಕೆ ಕಾಯಿಲೆ ಬಂದಾಗ ಈ ಔಷಧಗಳನ್ನು ಕೊಡಲೇ ಬೇಕಾಗುತ್ತದೆ”.

Leave a Comment

Your email address will not be published. Required fields are marked *