ಸಮಗ್ರ ನ್ಯೂಸ್: ಬಾವಿ ತೋಡುವ ಸಂದರ್ಭದಲ್ಲಿ ಸ್ಪೋಟಕ ಬಳಕೆ ಮಾಡಿರುವುದರಿಂದ ಸಮೀಪದ ಮನೆಗಳಿಗೆ ಹಾನಿಯಾಗಿರುವ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ಮಾ.8 ರಂದು ನಡೆದಿದೆ. ಈ ಮಧ್ಯೆ ಸ್ಪೋಟವಾಗದೆ ಬಾವಿಯೊಳಗೆ ಉಳಿದಿರುವ ಮದ್ದುಗುಂಡುಗಳನ್ನು ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದ್ದಾರೆ.
ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ಮೈಸೂರು ನಿವಾಸಿ ಸೋಮಶೇಖರ ಎಂಬವರು ತಮ್ಮ ಸಂಬಂಧಿಕರಿಂದ 23 ಸೆಂಟ್ಸ್ ಜಾಗ ಖರೀದಿಸಿದ್ದು ಅದರಲ್ಲಿ ಅಡಿಕೆ ಮರಗಳಿವೆ. ಈ ಜಾಗದಲ್ಲಿ ನೀರಿಗಾಗಿ ಬಾವಿ ತೋಡಿದ್ದು ಸುಮಾರು 15 ಅಡಿ ಆಳದಲ್ಲಿ ಕಲ್ಲು ಸಿಕ್ಕಿದ ಹಿನ್ನೆಲೆಯಲ್ಲಿ ಸ್ಪೋಟಕ ಬಳಸಿ ತೋಡಲು ಮುಂದಾಗಿದ್ದಾರೆ.
ಅದರಂತೆ ಮಾರ್ಚ್ 8ರಂದು ಸ್ಪೋಟಕ ಸಿಡಿಸಿದ್ದು ಇದರಿಂದ ಸಮೀಪದ ವಾಮನ ಮೂಲ್ಯ, ಕೆ.ಟಿ.ಮೋಹನ ಎಂಬವರ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಈ ಬಗ್ಗೆ ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದರು. ಅದೇ ದಿನ ಸ್ಥಳಕ್ಕೆ ಆಗಮಿಸಿದ ಕಡಬ ಠಾಣೆ ಸಬ್ ಇನ್ಸಪೆಕ್ಟರ್ ಜಂಬೂರಾಜ್ ಮಹಾಜನ್ ಅವರು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಮಧ್ಯೆ ಬಾವಿಯೊಳಗೆ ಸ್ಪೋಟವಾಗದೆ ಉಳಿದುಕೊಂಡಿದ್ದ ಮದ್ದು ಗುಂಡು ತೆರವುಗೊಳಿಸಲು ಬೆಳಿಗ್ಗೆ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿಗಳು ಆಗಮಿಸಿ ಕಾರ್ಯಾಚರಣೆ ಆರಂಭಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆಗೆ ಕೈ ಜೋಡಿಸಿದ್ದಾರೆ. ಕಡಬ ಎಸ್ ಐ ಜಂಬೂರಾಜ್ ಮಹಾಜನ್ ಹಾಗೂ ಸಿಬ್ಬಂದಿಗಳು , ಎಫ್ ಎಸ್ ಎಲ್ ಟೀಮ್ ನವರು ಉಪಸ್ಥಿತರಿದ್ದಾರೆ.







