ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ನೆಲದಡಿ ಮೃತದೇಹಗಳ ಅವಶೇಷ ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಸಾಧನವನ್ನು ಬಳಸಿ ಶೋಧ ಕಾರ್ಯವನ್ನು ಮಂಗಳವಾರ ಆರಂಭಿಸಿತು.
ಸಾಕ್ಷಿ ದೂರುದಾರ ತೋರಿಸಿದ್ದ 13ನೇ ಜಾಗದಲ್ಲಿ ಡ್ರೋನ್ ಮತ್ತು ಜಿಪಿಆರ್ ಬಳಸಿ ಸ್ಕ್ಯಾನ್ ಮಾಡಲಾಯಿತು. ರಾಡಾರ್ ಮೂಲಕ ಸಂಗ್ರಹಿಸಿರುವ ನೆಲದಡಿಯ ಚಿತ್ರಣಗಳನ್ನು ತಜ್ಞರು ವಿಶ್ಲೇಷಣೆಗೆ ಒಳಪಡಿಸುತ್ತಿದ್ದಾರೆ.
ಸಾಕ್ಷಿ ದೂರುದಾರ ಮೃತದೇಹಗಳನ್ನು ಹೂತಿರುವುದಾಗಿ ಹೇಳಿ, ಇದುವರೆಗೆ 17 ಜಾಗಗಳನ್ನು ತೋರಿಸಿದ್ದು, ಅವುಗಳಲ್ಲಿ ಎರಡು ಕಡೆ ಮಾತ್ರ ಮೃತದೇಹಗಳ ಅವಶೇಷ ಸಿಕ್ಕಿದೆ. ಆತ ತೋರಿಸಿದ 13 ನೇ ಜಾಗದಲ್ಲಿ ಜಿಪಿಆರ್ ಬಳಸಿ ಶೋಧ ಕಾರ್ಯ ನಡೆಸಿದ ವೇಳೆ ಮೃತದೇಹಗಳ ಅವಶೇಷ ಪತ್ತೆಯಾದರೆ ಮಾತ್ರ, ಈ ಜಾಗವನ್ನು ಅಗೆಯಲು ಎಸ್ಐಟಿ ನಿರ್ಧರಿಸಿದೆ.







