ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೆಕೆಂದು ಧರ್ಮಸ್ಥಳ ದೇವಾಲಯದ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಡಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದ್ದು, ಯಾವುದೇ ರೀತಿಯ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅಲ್ಲದೆ ಹೊಸದಾಗಿ ಧರ್ಮಸ್ಥಳದ ಅರ್ಜಿಯನ್ನು ನಿರ್ಧರಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕರ್ನಾಟಕ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಧರ್ಮಸ್ಥಳ ದೇವಾಲಯದ ಧರ್ಮಾಧಿಕಾರಿಯ ಸಹೋದರ ಹರ್ಷೇಂದ್ರ ಕುಮಾರ್ ಡಿ ಅವರು ಧರ್ಮಸ್ಥಳ ಸಮಾಧಿ ಪ್ರಕರಣಗಳಿಗೆ ಸಂಬಂಧಿಸಿದಂತೆ ದೇವಾಲಯ ಆಡಳಿತ ಮಂಡಳಿ ಅಥವಾ ಕುಟುಂಬದ ವಿರುದ್ಧ ಮಾಧ್ಯಮಗಳು ಅವಹೇಳನಕಾರಿ ವಿಷಯಗಳನ್ನು ಪ್ರಕಟಿಸುವುದನ್ನು ತಡೆಯುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಮುಂದಿನ ವಿಚಾರಣೆಯ ದಿನಾಂಕದಿಂದ ಎರಡು ವಾರಗಳಲ್ಲಿ ನಿರ್ಧರಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ (ಆಗಸ್ಟ್ 8) ಬೆಂಗಳೂರು ಸಿವಿಲ್ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಕರ್ನಾಟಕ ಹೈಕೋರ್ಟ್ ಯೂಟ್ಯೂಬ್ ಚಾನೆಲ್ ಮೇಲಿನ ನಿರ್ಬಂಧ ಆದೇಶವನ್ನು ತೆಗೆದುಹಾಕಿದ ಆದೇಶವನ್ನು ಪ್ರಶ್ನಿಸಿ, ಹರ್ಷೇಂದ್ರ ಕುಮಾರ್ ಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿತ್ತು. ಈ ಆದೇಶವನ್ನು ವಿಚಾರಣಾ ನ್ಯಾಯಾಲಯವು ಕಾಲಮಿತಿಯೊಳಗೆ ನಿರ್ಧರಿಸುವಂತೆ ನಿರ್ದೇಶಿಸಿತ್ತು. ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರ ಪೀಠದ ಮುಂದೆ ಅರ್ಜಿದಾರರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟ್ಗಿ ವಾದ ಮಂಡಿಸಿದರು.
ತನಿಖೆ ಬಾಕಿ ಇರುವಾಗಲೂ ಮಾಧ್ಯಮಗಳು ಮಾನನಷ್ಟ ರೀತಿಯಲ್ಲಿ ವರದಿ ಮಾಡುತ್ತಿವೆ ಎಂದು ಹಿರಿಯ ವಕೀಲ ರೋಹಟ್ಗಿ ಆರೋಪಿಸಿದರು. ಅಲ್ಲದೆ ಕೆಲವು ಮಾಧ್ಯಮಗಳ ವರದಿಯನ್ನು ಕೋರ್ಟ್ ಗಮನಕ್ಕೆ ತಂದರು. ಆದರೆ ಪ್ರಸಾರವಾಗುತ್ತಿರುವ ವಿಷಯವು ಅಸಹ್ಯಕರ ಮತ್ತು ಮಾನಹಾನಿಕರವಾಗಿದೆ ಎಂದು ಅದು ಮೌಖಿಕವಾಗಿ ಒಪ್ಪಿಕೊಂಡಿತು. ವಿರಳ ಮತ್ತು ಅಪರೂಪದ ಪ್ರಕರಣಗಳಲ್ಲಿ ಮಾತ್ರ ಗ್ಯಾಗ್ ಆದೇಶಗಳನ್ನ ಹೊರಡಿಸಲಾಗುತ್ತೆ. ಇಂತಹ ಆದೇಶ ವಾಕ್ ಸ್ವಾತಂತ್ರ್ಯವನ್ನ ಹತ್ತಿಕ್ಕುತ್ತವೆ. ನಾವು ತಡೆಯಾಜ್ಞೆ ನೀಡಿದ್ರೆ ಅನಾಮಿಕ ವ್ಯಕ್ತಿಯ ಹೇಳಿಕೆಯನ್ನು ಸಹ ವರದಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಮನಮೋಹನ್ ಹೇಳಿದರು. ಈ ವಿಷಯವನ್ನು ರಾಜ್ಯದ ವಿಚಾರಣಾ ನ್ಯಾಯಾಲಯವೇ ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟರು.







