ಸಮಗ್ರ ನ್ಯೂಸ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ದೊಡ್ಡ ಹೊಡೆತವನ್ನು ನೀಡಿದ್ದಾರೆ. ಭಾರತದ 6 ಪೆಟ್ರೋಲಿಯಂ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದೆ. ನಿಷೇಧಕ್ಕೊಳಗಾಗಿರುವ ಭಾರತದ 6 ಕಂಪನಿಗಳು ಇರಾನ್ ಜೊತೆ ವ್ಯವಹಾರ ನಡೆಸುತ್ತಿದ್ದವು ಎಂದು ಅಮೆರಿಕದ ವಿದೇಶಾಂಗ ಸಚಿವಾಲಯ ಹೇಳುತ್ತಿದೆ.
NDTV ವರದಿಯ ಪ್ರಕಾರ, ಇರಾನ್ ದೇಶ ತನ್ನ ಆದಾಯ ಬಹುದೊಡ್ಡ ಭಾಗವನ್ನು ಪ್ರಾದೇಶಿಕ ಸಂಘರ್ಷ ಉತ್ತೇಜಿಸಲು ಖರ್ಚು ಮಾಡುತ್ತಿದೆ. ಇರಾನ್ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ.
ಮಧ್ಯಪ್ರಾಚ್ಯದಲ್ಲಿ ಸಂಘರ್ಷವನ್ನು ಉತ್ತೇಜಿಸುವ ಕೆಲಸವನ್ನು ಇರಾನ್ ಸರ್ಕಾರ ಮಾಡುತ್ತಿದ್ದು, ದೇಶಗಳಲ್ಲಿ ಅಸ್ಥಿರತೆಯನ್ನು ಹರಡಲು ಹಣವನ್ನು ಬಳಸುವ ಮೂಲಕ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ. ತನ್ನ ಜನರನ್ನು ದಮನಿಸಲು ಬಳಸಲು ಇರಾನ್ ಸರ್ಕಾರ ಬಳಕೆ ಮಾಡುತ್ತಿರುವ ಆದಾಯದ ಮೂಲವನ್ನು ತಡೆಯಲು ಅಮೆರಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರು ಹೇಳಿಕೆ ನೀಡಿದ್ದಾರೆ. ಇರಾನ್ ಜೊತೆ ವ್ಯವಹಾರ ನಡೆಸುತ್ತಿರುವ ಭಾರತದ 6 ಕಂಪನಿಗಳು ಸೇರಿದಂತೆ ಒಟ್ಟು 20 ಕಂಪನಿಗಳನ್ನು ಅಮೆರಿಕ ನಿಷೇಧಿಸಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಬುಧವಾರ ಹೇಳಿದೆ.
ಅಮೆರಿಕ ಸರ್ಕಾರ ಭಾರತದ ಜೊತೆಗೆ ಟರ್ಕಿ, ಯುಎಇ, ಚೀನಾ ಮತ್ತು ಇಂಡೋನೇಷ್ಯಾ ಸೇರಿದಂತೆ ಇತರ ದೇಶಗಳ ಕಂಪನಿಗಳನ್ನು ಸಹ ನಿಷೇಧಿಸಿದೆ. ಈ ದೇಶಗಳ ಕಂಪನಿಗಳು ಇರಾನ್‌ನೊಂದಿಗೆ ವ್ಯವಹಾರ ನಡೆಸುತ್ತಿವೆ ಎಂದು ಅಮೆರಿಕ ಹೇಳಿದೆ. ಇರಾನ್ ಆದಾಯವನ್ನು ತಗ್ಗಿಸುವ ನಿಟ್ಟಿನಲ್ಲಿ ಅಮೆರಿಕ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿಕೊಂಡಿದೆ.







